ಮಂಗಳೂರು, ನ.7: ಸರ್ವಧರ್ಮಗಳ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರುವ 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆ ನ.8ರಂದು ಮಂಗಳೂರಿನಲ್ಲಿ ನಡೆಯಲಿದೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಕದ್ರಿ ಪಾರ್ಕ್ ಸಮೀಪದ ಶ್ರೀ ಗೋರಕ್ಷನಾಥ ಜ್ಞಾನಮಂದಿರ ಸಭಾಂಗಣದಲ್ಲಿ ಮಧ್ಯಾಹ್ನ 1.30ರಿಂದ ರಾತ್ರಿ 9ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಳೆದ 11 ವರ್ಷಗಳಿಂದ ವಿವಿಧ ಧರ್ಮಗಳ ಜನರನ್ನು ಒಗ್ಗೂಡಿಸಿ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬಗಳನ್ನು ಭಾವೈಕ್ಯತೆಯ ಸಂಕೇತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಭರತನಾಟ್ಯ, ಚಿತ್ರಕಲೆ ಹಾಗೂ ಗೂಡುದೀಪ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಚಿತ್ರಕಲಾ ಮತ್ತು ಗೂಡುದೀಪ ಸ್ಪರ್ಧೆಗಳು ನಡೆಯಲಿದ್ದು, 3.30ಕ್ಕೆ ಭರತನಾಟ್ಯ ಸ್ಪರ್ಧೆ ಆರಂಭವಾಗಲಿದೆ. ಭರತನಾಟ್ಯ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ 20 ಸಾವಿರ ರೂ. ಹಾಗೂ ತೃತೀಯ 15 ಸಾವಿರ ರೂ. ನಗದು ಬಹುಮಾನದೊಂದಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಚಿತ್ರಕಲಾ ಸ್ಪರ್ಧೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಸಂಜೆ 3 ಗಂಟೆಗೆ ನಡೆಯುವ ಧಾರ್ಮಿಕ ಸಭೆಯನ್ನು ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಪಾಲ್ದಾನೆ ಚರ್ಚ್ನ ಧರ್ಮಗುರು ವಂ. ರೆ. ಫಾ. ರಿಚರ್ಡ್ ಕುವೆಲ್ಲೊ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್. ಹಸನಬ್ಬ ಚಾರ್ಮಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರನ್ನು ಸನ್ಮಾನಿಸಲಾಗುವುದು. ಚಿತ್ರಕಲಾ ಸ್ಪರ್ಧೆಯನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಭರತನಾಟ್ಯ ಸ್ಪರ್ಧೆಯನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಹಾಗೂ ಗೂಡುದೀಪ ಸ್ಪರ್ಧೆಯನ್ನು ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

