ಮಲಪ್ಪುರಂ: ಕೇರಳದಲ್ಲಿ ಮತ್ತೆ ಶಿಗೆಲ್ಲಾ ಸೋಂಕು ಕಾಣಿಸಿಕೊಂಡಿದೆ. ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಒಟ್ಟು ಐವರಿಗೆ ಸೋಂಕು ದೃಢಪಟ್ಟಿದೆ. ಎರಡೂ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಮಲಪ್ಪುರಂ ಜಿಲ್ಲೆಯ ಅಮರಂಬಲಂನ ಅಂಗಡಿಯೊಂದರಲ್ಲಿ ಲಘು ಉಪಾಹಾರ ಸೇವಿಸಿದ್ದ ನಾಲ್ಕು ವರ್ಷದ ಮಗುವಿಗೆ ಹಾಗೂ ಪಾಲುಂಡದಲ್ಲಿನ ಅಂಗಡಿಯೊಂದರಲ್ಲಿ ಮಂತಿ ಸೇವಿಸಿದ್ದ ಇಬ್ಬರಿಗೆ ಶಿಗೆಲ್ಲಾ ಸೋಂಕು ದೃಢಪಟ್ಟಿದೆ. ಇದೇ ವೇಳೆ, ರೋಗಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಇತರ ಕೆಲವರ ಪರೀಕ್ಷಾ ವರದಿಗಳು ಬರಬೇಕಿವೆ.

ಈ ಪ್ರದೇಶದಲ್ಲಿ ಸುಮಾರು 23 ಮಂದಿಗೆ ಅತಿಸಾರ, ವಾಂತಿ ಹಾಗೂ ಹೊಟ್ಟೆನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಸೋಂಕಿತರ ಮನೆಗಳ ಸುತ್ತಮುತ್ತ ಕ್ಲೋರಿನೇಷನ್ ಕಾರ್ಯ ನಡೆಸಲಾಗಿದೆ.

ಇನ್ನು ಕೋಝಿಕ್ಕೋಡ್ ಜಿಲ್ಲೆಯಲ್ಲಿಯೂ ಇಬ್ಬರು ಮಕ್ಕಳಿಗೆ ಶಿಗೆಲ್ಲಾ ಸೋಂಕು ದೃಢಪಟ್ಟಿದೆ. ಮೇಪ್ಪಯಿಲ್ ಸೀನಿಯರ್ ಬೇಸಿಕ್ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢವಾಗಿದೆ. ವಾಂತಿ, ಜ್ವರ ಹಾಗೂ ಅತಿಸಾರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದಕ್ಕೂ ಮೊದಲು ಇದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿಗೂ ಶಿಗೆಲ್ಲಾ ಸೋಂಕು ದೃಢಪಟ್ಟಿತ್ತು. ಶಾಲೆಯಲ್ಲಿ ಮಧ್ಯಾಹ್ನದ ಊಟದ ವೇಳೆ ಮೊಟ್ಟೆಕಾಳು ಸಾರು ಮತ್ತು ಮೊಸರು ಸೇವಿಸಿದ್ದ ಮಕ್ಕಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ.

ಎರಡೂ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸಾರ್ವಜನಿಕರು ಆಹಾರ ಮತ್ತು ಕುಡಿಯುವ ನೀರಿನ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಗಿದೆ.

