ಪುತ್ತೂರು: ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ನೆಪವೊಡ್ಡಿ ಅಧಿಕಾರಕ್ಕೆ ಬಂದು ಬಡವರ ರಕ್ತ ಹೀರುತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣವಾಗಿ ದಿವಾಳಿ ಎಬ್ಬಿಸಿದೆ. ಇನ್ನೊಂದೆಡೆ ಪುತ್ತೂರು ಶಾಸಕರು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಬಂಡಲ್ ಬಡಾಯಿ, ರೀಲ್ಸ್ ಹಾಗೂ ಬಿಜೆಪಿಯ ಹಿರಿಯರನ್ನು ಏಕವಚನದಲ್ಲಿ ನಿಂದಿಸುವ ಚಾಳಿ ಮುಂದುವರಿಸಿದರೆ ಅವರ ಮನೆ ಮುಂದೆಯೇ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ನೇರ ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಜನತಾ ಪಾರ್ಟಿ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ – ನಮ್ಮ ಹಕ್ಕು ನಮಗೆ ನೀಡಿ” ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಭೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ವಿದ್ಯಾಗೌರಿ, ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಪ್ರಮುಖರಾದ ಶಶಿಧರ್ ನಾಯಕ್, ಲೋಕೇಶ್ ಚಾಕೋಟೆ, ಯುವರಾಜ್ ಪೆರಿಯತ್ತೋಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ್ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಶಾಸಕ ಅಶೋಕ್ ರೈಗೆ ಖಡಕ್ ವಾರ್ನಿಂಗ್ – ಅಧಿಕಾರದ ಮದ ತಲೆಗೇರಿದೆ:
ಪುತ್ತೂರು ಶಾಸಕ ಅಶೋಕ್ ರೈ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು, “ಕುತ್ತಿಗೆಯಲ್ಲಿ ಹತ್ತಾರು ಮೈಕ್ ಇಟ್ಟುಕೊಂಡು ಪತ್ರಿಕೆಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುವುದು, ಬಿಜೆಪಿಯನ್ನು ಜರಿಯುವುದು ಹಾಗೂ ಪಕ್ಷ ಕಟ್ಟಿದ ಹಿರಿಯ ನಾಯಕರನ್ನು ಏಕವಚನದಲ್ಲಿ ನಿಂದಿಸುವುದನ್ನು ನಿಲ್ಲಿಸಬೇಕು. ‘ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ’ ಎಂಬಂತೆ, ಈ ಹಿಂದೆ ಬಿಜೆಪಿಯಲ್ಲೇ ಇದ್ದು, ಬಿಜೆಪಿಯ ಹಿರಿಯರ ಸಂಪರ್ಕದಿಂದಲೇ ಗುರುತಿಸಿಕೊಂಡಿದ್ದ ನೀವು, ಇಂದು ಅಧಿಕಾರ ಸಿಕ್ಕ ತಕ್ಷಣ ಬಿಜೆಪಿಯವರು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಾರೆ ಎಂದು ಹೀಯಾಳಿಸುತ್ತಿದ್ದೀರಿ. ಬಿಜೆಪಿ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ತ್ಯಾಗದಿಂದ ಬೆಳೆದು ಬಂದ ಪುಣ್ಯದ ಮಣ್ಣಿನ ಪಕ್ಷ. ಇನ್ನಾದರೂ ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಿ, ಇಲ್ಲವಾದರೆ ನಿಮ್ಮ ಮನೆ ಮುಂದೆ ಬಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ” ಎಂದು ಎಚ್ಚರಿಸಿದರು.
“ಕಬಕಕ್ಕೆ ಹೋಗಿ ನೋಡಿದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ 15ನೇ ಹಣಕಾಸು ಆಯೋಗದ ₹95 ಲಕ್ಷ ಅನುದಾನದ ಕಾಮಗಾರಿಗೆ ತಮ್ಮದೇ ಹೆಸರು ಹಾಕಿ ಬೋರ್ಡ್ ಹಾಕಿಕೊಂಡಿದ್ದಾರೆ. ನಿಮ್ಮ ಈ ಬಂಡಲ್ ಬಡಾಯಿ, ಪ್ರಚಾರದ ಹುಚ್ಚು ಮತ್ತು ರೀಲ್ಸ್ ಮಾಡುವುದನ್ನು ಬಿಟ್ಟು ಜನರಿಗಾಗಿ ಅಭಿವೃದ್ಧಿ ಕೆಲಸ ಮಾಡಿ. ನಿಮಗೆ ಅಧಿಕಾರದ ಮದ, ಅಹಂಕಾರ ತಲೆಗೇರಿದೆ; ನಿಮ್ಮ ಮಿತಿಮೀರಿದ ವರ್ತನೆಗೆ ಇಂದಿನಿಂದಲೇ ಬ್ರೇಕ್ ಹಾಕುತ್ತೇವೆ” ಎಂದು ಶಾಸಕರಿಗೆ ತಪರಾಕಿ ನೀಡಿದರು.

ಬಡವರ ರಕ್ತ ಹೀರುವ ಸರ್ಕಾರ – ನಗರಸಭೆಗಳಲ್ಲಿ ವಸತಿ ಯೋಜನೆ ಶೂನ್ಯ:
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಹಗರಣಗಳಲ್ಲಿ ಮುಳುಗಿದೆ. ವಾಲ್ಮೀಕಿ ನಿಗಮದ ₹187 ಕೋಟಿ, ಮೂಡಾ ಹಗರಣದಲ್ಲಿ ಸೈಟುಗಳನ್ನು ನುಂಗಿ, ಪರಿಶಿಷ್ಟ ಜಾತಿ-ಪಂಗಡದ ₹36,000 ಕೋಟಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಲೂಟಿ ಮಾಡಿ ರಾಜ್ಯದ ಖಜಾನೆಯನ್ನು ಬರಿದು ಮಾಡಿದೆ. ನಗರಸಭೆ, ಪುರಸಭೆ ಹಾಗೂ ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಅಧಿಕಾರಿಶಾಹಿಯ ಆಡಳಿತ ತಂದು ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಡ ವಯೋವೃದ್ಧರ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿಗೂ ಕತ್ತರಿ ಹಾಕಿ ಶಾಪ ಕಟ್ಟಿಕೊಳ್ಳುತ್ತಿದ್ದಾರೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಾವಿರಾರು ಬಡವರು ಸೂರು ಕೇಳಿ ಅರ್ಜಿ ಸಲ್ಲಿಸಿದ್ದರೂ ಕಳೆದ ಮೂರು ವರ್ಷಗಳಲ್ಲಿ ವಾಜಪೇಯಿ ಅಥವಾ ಅಂಬೇಡ್ಕರ್ ಆವಾಸ್ ಯೋಜನೆಯಡಿ ಒಂದೇ ಒಂದು ಮನೆಯನ್ನು ಮಂಜೂರು ಮಾಡಿಲ್ಲ. ಎಲ್.ಬಿ.ಪಾಸ್ (LBPAS) ತಂತ್ರಾಂಶದಲ್ಲಿನ ಲೋಪಗಳಿಂದಾಗಿ ಜನಸಾಮಾನ್ಯರು, ಬಿಲ್ಡರ್‌ಗಳು ಕಟ್ಟಡ ಪರವಾನಗಿಗಾಗಿ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯುವ ದುಃಸ್ಥಿತಿ ನಿರ್ಮಾಣವಾಗಿದೆ” ಎಂದು ದೂರಿದರು.
ಖಾಲಿ ಹುದ್ದೆಗಳ ಭರ್ತಿಯಿಲ್ಲ, ರಸ್ತೆಗಳಿಗೆ ನಯಾಪೈಸೆ ಹಣವಿಲ್ಲ:
“ನಾನು ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ರಾಜ್ಯದ 42 ಇಲಾಖೆಗಳಲ್ಲಿ ಬರೋಬ್ಬರಿ 2,84,888 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. 1,000ಕ್ಕೂ ಹೆಚ್ಚು ಪಿಡಿಒ ಹುದ್ದೆಗಳು ಖಾಲಿಯಿದ್ದು, 2024ರಲ್ಲಿ ಪರೀಕ್ಷೆ ನಡೆಸಿದ್ದರೂ ಇಂದಿಗೂ ಫಲಿತಾಂಶ ಪ್ರಕಟಿಸಿಲ್ಲ. ಯುವಜನತೆಗೆ ಉದ್ಯೋಗವಿಲ್ಲದೆ ಬೀದಿಗೆ ತಳ್ಳಲಾಗಿದೆ. ರಾಜ್ಯದ ಗ್ರಾಮೀಣ ರಸ್ತೆಗಳಿಗಾಗಿ ₹5,000 ಕೋಟಿ ಪ್ರಗತಿ ಪಥ ಯೋಜನೆ ಎಂದು ಘೋಷಿಸಿ, ಬಜೆಟ್‌ನಲ್ಲಿ ಇಟ್ಟಿದ್ದು ಕೇವಲ ₹500 ಕೋಟಿ ಮಾತ್ರ. ಜನರನ್ನು ಮಂಗ ಮಾಡುವ ಈ ದಿವಾಳಿ ಸರ್ಕಾರಕ್ಕೆ ಬಡವರ ಶಾಪ ತಟ್ಟುವ ಮುನ್ನವೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ತೊಲಗಲಿ. ಜನವಿರೋಧಿ ಕಾಂಗ್ರೆಸ್ ಸರ್ಕಾರ ಹಾಗೂ ಪುತ್ತೂರಿನ ಅಹಂಕಾರಿ ಆಡಳಿತದ ವಿರುದ್ಧ ಬಿಜೆಪಿ ಜನಜಾಗೃತಿ ಆಂದೋಲನ ನಿರಂತರವಾಗಿ ಮುಂದುವರಿಯಲಿದೆ” ಎಂದು ಕಿಶೋರ್ ಕುಮಾರ್ ಪುತ್ತೂರು ಗುಡುಗಿದರು.

