ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಶಿರಿಯಕುನ್ನು ಬಳಿ ಮಂಗಳವಾರ ಮುಂಜಾನೆ ಭೀಕರ ಅಪಘಾತವೊಂದು ಸಂಭವಿಸಿದೆ. ತಲಪಾಡಿಯಿಂದ ಕಾಸರಗೋಡು ಕಡೆಗೆ ಗಸ್ತು ತಿರುಗುತ್ತಿದ್ದ ಪೊಲೀಸ್ ಇಲಾಖೆಯ ಹೈವೇ ಪೆಟ್ರೋಲಿಂಗ್ ವಾಹನಕ್ಕೆ, ಮಂಗಳೂರು ಕಡೆಯಿಂದ ಅತಿ ವೇಗವಾಗಿ ಬಂದ ಆಂಧ್ರಪ್ರದೇಶ ನೋಂದಾಯಿತ ಕಾರು ಹಿಂಭಾಗದಿಂದ ರಭಸವಾಗಿ ಢಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಪೊಲೀಸ್ ವಾಹನದ ಹಿಂಭಾಗ ಹಾಗೂ ಕಾರಿನ ಮುಂಭಾಗ ನಜ್ಜುಗುಜ್ಜಾಗಿವೆ. ಘಟನೆಯಲ್ಲಿ ಪೆಟ್ರೋಲಿಂಗ್ ವಾಹನದಲ್ಲಿದ್ದ ಎಸ್ಐ ರಾಘವ, ಸಿಬ್ಬಂದಿಗಳಾದ ನಿಖಿಲ್ ಮನು, ವಿನು ಮತ್ತು ಚಾಲಕ ಸುಭಾಷ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಾರು ಚಾಲಕ ಮಂಗಳೂರಿನ ವಿನೋದ್ ರಾಜ್ (36) ಕೂಡ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾನೆ. ಕುಂಬಳೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

