ಮಂಗಳೂರು: ರಾಜ್ಯದಲ್ಲಿ ಕಳೆದ ಮೂರುವರೆ ವರ್ಷಗಳಿಂದ ಅಗತ್ಯ ವಸ್ತುಗಳು ಹಾಗೂ ವಿವಿಧ ಸೇವೆಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಆರೋಪಿಸಿದ್ದಾರೆ.

ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ. ಇದರಿಂದ ಸಾಮಾನ್ಯ ಜನರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬಿದ್ದಿದೆ. ಒಂದು ಕಡೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ; ಇನ್ನೊಂದೆಡೆ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಹೇಳಿದರು.

ಜನನ ಮತ್ತು ಮರಣ ಪ್ರಮಾಣಪತ್ರ, ಸೇರಿದಂತೆ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ಶೇ.300ರಷ್ಟು ಹೆಚ್ಚಿಸಲಾಗಿದೆ. ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ವಿವಿಧ ಶುಲ್ಕಗಳ ಏರಿಕೆಯೂ ಜನರಿಗೆ ಹೊರೆಯಾಗಿದೆ ಎಂದು ಅವರು ದೂರಿದರು.

ರಾಜ್ಯವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳಿರುವ ಸರ್ಕಾರ, ತನ್ನ ಅಸಮರ್ಪಕ ಯೋಜನೆಗಳ ಹೊಣೆಯನ್ನು ಜನರ ಮೇಲೆ ಹೊರಿಸುತ್ತಿದೆ. ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯಕ್ಕೆ ಜನಸಾಮಾನ್ಯರು ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಸಾಮಾನ್ಯ ಬಸ್‌ಗಳ ಪ್ರಯಾಣ ದರವನ್ನು ತಕ್ಷಣ ಇಳಿಸಬೇಕು. ನಾಗರಿಕ ಸೇವೆಗಳ ಶುಲ್ಕ ಹಾಗೂ ಸ್ಟ್ಯಾಂಪ್ ಡ್ಯೂಟಿಯನ್ನು ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು. ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕರಾದ ವಸಂತ ಜೆ ಪೂಜಾರಿ ಉಪಸ್ಥಿತರಿದ್ದರು .

