ಕಾಸರಗೋಡು: ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗಾಗಿ ಹಲವು ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಕಾಸರಗೋಡಿನ ಡಾ. ವಾಮನರಾವ್ ಬೇಕಲ್ ಅವರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಗಮನ ಸೆಳೆಯುತ್ತಿದ್ದಾರೆ. ದಕ್ಷಿಣ ಅಮೆರಿಕದ ಬೊಲಿವಿಯಾದಲ್ಲಿ ನಡೆಯಲಿರುವ ಮೂರನೇ ಅಂತಾರಾಷ್ಟ್ರೀಯ ವರ್ಚುವಲ್ ಪುಸ್ತಕ ಮೇಳದಲ್ಲಿ ಸಾಹಿತ್ಯಾಸಕ್ತರಾಗಿ ಹಾಗೂ ಪುಸ್ತಕ ಪ್ರೇಮಿಯಾಗಿ ಸಂದರ್ಶನಕ್ಕೆ ಆಹ್ವಾನಿತರಾಗಿದ್ದಾರೆ.

ಸರಳತೆ, ಸೌಮ್ಯ ಸ್ವಭಾವ ಹಾಗೂ ಉದಾರ ಹೃದಯದ ವ್ಯಕ್ತಿತ್ವ ಹೊಂದಿರುವ ಡಾ. ವಾಮನರಾವ್ ಬೇಕಲ್ ಅವರು ಸ್ವತಃ ಕವಿ ಹಾಗೂ ಸಾಹಿತ್ಯಾಸಕ್ತರು. ಕನ್ನಡ ಸಾಹಿತ್ಯದ ಮೇಲಿನ ಅಪಾರ ಪ್ರೀತಿಯಿಂದ ತಮ್ಮ ವಿಶಾಲ ನಿವಾಸವನ್ನೇ ‘ಕನ್ನಡ ಭವನ’ವನ್ನಾಗಿ ರೂಪಿಸಿದ್ದು, ಅಲ್ಲಿ ಸುಮಾರು 45 ಸಾವಿರ ಪುಸ್ತಕಗಳ ಬೃಹತ್ ಸಂಗ್ರಹವನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡಿದ್ದಾರೆ. ಈ ಸಂಗ್ರಹದಲ್ಲಿ ಅವರ ಸ್ವಂತ ಕೃತಿಗಳೂ ಸೇರಿವೆ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತೀ ತಿಂಗಳು ಎರಡು ಮೂರು ಬಾರಿ ಕವಿಗೋಷ್ಠಿಗಳನ್ನು ಆಯೋಜಿಸುತ್ತಾರೆ. ನಾಡಿನ ಹೆಸರಾಂತ ಕವಿಗಳು ಹಾಗೂ ಸಾಹಿತಿಗಳನ್ನು ಆಹ್ವಾನಿಸಿ, ಸ್ವಂತ ಖರ್ಚಿನಲ್ಲಿ ಗೌರವಿಸುವ ಮೂಲಕ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಕೇರಳಕ್ಕೆ ಆಗಮಿಸುವ ಕನ್ನಡ ಕವಿಗಳು ಹಾಗೂ ಸಾಹಿತಿಗಳಿಗೆ ತಮ್ಮ ಮನೆಯಲ್ಲೇ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಿ ಆತಿಥ್ಯ ನೀಡುವುದು ಅವರ ವಿಶೇಷತೆ. ಪತ್ನಿ ಸಂಧ್ಯಾರಾಣಿ ಅವರೂ ಈ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೇವೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದ ಅಪಾರ ಕೊಡುಗೆಗಾಗಿ ಹಲವು ಪ್ರಶಸ್ತಿ ಹಾಗೂ ಗೌರವಗಳಿಗೆ ಪಾತ್ರರಾಗಿರುವ ವಾಮನರಾವ್ ಬೇಕಲ್ ಅವರು, ಇತ್ತೀಚೆಗೆ ಕರ್ನಾಟಕ ದಸರಾ 2026ರ ಅಂಗವಾಗಿ ತಮ್ಮ ಊರಿನ ದೇವಸ್ಥಾನದಲ್ಲಿ ಕವಿಗೋಷ್ಠಿ ಆಯೋಜಿಸಿ, ಅಕ್ಟೋಬರ್ನಲ್ಲಿ ಆಗಮಿಸಿದ್ದ ಕವಿಯೊಬ್ಬರಿಗೆ ‘ಕವಿ ಶ್ರೇಷ್ಠಿ-2026’ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಇದೀಗ ‘ಡಿಸ್ಕವರ್ ಬುಕ್ ಕಲ್ಚರಲ್ ಅಂಬಾಸಿಡರ್ 3ನೇ ಬೊಲಿವಿಯಾ ವರ್ಚುವಲ್ ಬುಕ್ ಫೇರ್-2026’ರಲ್ಲಿ ಭಾಗವಹಿಸಲು ಆಹ್ವಾನ ದೊರೆತಿರುವುದು ಅವರ ಸಾಹಿತ್ಯಿಕ ಸಾಧನೆಗೆ ಮತ್ತೊಂದು ಗರಿಯಾಗಿದೆ. ನವೆಂಬರ್ 18ರಂದು ನಡೆಯಲಿರುವ ಈ ಅಂತಾರಾಷ್ಟ್ರೀಯ ವರ್ಚುವಲ್ ಪುಸ್ತಕ ಮೇಳದಲ್ಲಿ ಭಾರತೀಯ ಕಾಲಮಾನ ರಾತ್ರಿ 8.15ರಿಂದ 8.45ರವರೆಗೆ ಡಾ. ವಾಮನರಾವ್ ಬೇಕಲ್ ಅವರ ವಿಶೇಷ ಸಂದರ್ಶನ ನಡೆಯಲಿದೆ. ಬಳಿಕ ರಾತ್ರಿ 9ರಿಂದ 9.30ರವರೆಗೆ ಪುಸ್ತಕ ಪರಿಚಯ, ಪುಸ್ತಕ ವಾಚನ ಹಾಗೂ ಕವನ ವಾಚನ ಕಾರ್ಯಕ್ರಮಗಳು ಜರುಗಲಿವೆ. ಬೊಲಿವಿಯಾ ಸ್ಥಳೀಯ ಕಾಲಮಾನದ ಪ್ರಕಾರ ಈ ಕಾರ್ಯಕ್ರಮಗಳು ಬೆಳಗ್ಗೆ 9.45ರಿಂದ 10.15ರವರೆಗೆ ಹಾಗೂ 10.30ರಿಂದ 11ರವರೆಗೆ ನಡೆಯಲಿವೆ.

ಸಂದರ್ಶನದಲ್ಲಿ ಡಾ. ವಾಮನರಾವ್ ಬೇಕಲ್ ಅವರ ಸಾಹಿತ್ಯಿಕ ಬದುಕು, 45 ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹ, ಕನ್ನಡ ಭಾಷೆಯ ಮೇಲಿನ ಅಭಿಮಾನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಅಪಾರ ಕೊಡುಗೆಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ. ದೂರದ ದಕ್ಷಿಣ ಅಮೆರಿಕದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಸಾಹಿತ್ಯದ ಕಂಪು ಪಸರಿಸಲು ಈ ಕಾರ್ಯಕ್ರಮ ಉತ್ತಮ ಅವಕಾಶ ಕಲ್ಪಿಸಲಿದೆ.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಹಿತಿಗಳ ಸೇವೆಯನ್ನೇ ಬದುಕಿನ ಧ್ಯೇಯವನ್ನಾಗಿಸಿಕೊಂಡಿರುವ ಡಾ. ವಾಮನರಾವ್ ಬೇಕಲ್ ಅವರಿಗೆ ದೊರೆತಿರುವ ಈ ಅಂತಾರಾಷ್ಟ್ರೀಯ ಆಹ್ವಾನ ಕಾಸರಗೋಡು ಸೇರಿದಂತೆ ನಾಡಿನ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ.

