
ಮಂಗಳೂರು: ಸಾನಿಧ್ಯ ಸಂಸ್ಥೆಯ ವಿಶೇಷ ಮಕ್ಕಳು ಹಾಗೂ ವಿಶೇಷ ಶಿಕ್ಷಕರು ದೀಪಾವಳಿ ಹಬ್ಬದ ಅಂಗವಾಗಿ ವಿವಿಧ ಸರ್ಕಾರಿ ಅಧಿಕಾರಿಗಳು ಹಾಗೂ ಗಣ್ಯರನ್ನು ಭೇಟಿಯಾಗಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.



ಸಾನಿಧ್ಯದ ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರದಲ್ಲಿ ವಿಶೇಷ ಮಕ್ಕಳು ತಮ್ಮ ಕೈಗಳಿಂದಲೇ ಬಣ್ಣ ಹಚ್ಚಿ, ಸುಂದರವಾಗಿ ಅಲಂಕರಿಸಿದ ಮಣ್ಣಿನ ಹಣತೆಗಳನ್ನು ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡಿದರು.



ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಅವರ ಆಪ್ತ ಕಾರ್ಯದರ್ಶಿ ಪೊಲೀಸ್ ಅಧಿಕಾರಿ ಗೀತಾ ಕುಲಕರ್ಣಿ, ವಾಮಂಜೂರು ಪೊಲೀಸ್ ಠಾಣೆಯ ಅಧಿಕಾರಿಗಳು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮನೀಶ್, ಲಲಿತಕಲಾ ಆರ್ಟ್ಸ್ ಮಾಲಕ ಧನಪಾಲ್ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭೇಟಿಯಾಗಿ ಹಣತೆಗಳನ್ನು ನೀಡಿ ದೀಪಾವಳಿ ಶುಭಾಶಯ ಕೋರಿದರು.


ವಿಶೇಷ ಮಕ್ಕಳ ಪ್ರೀತಿಯ ಉಡುಗೊರೆಯನ್ನು ಆತ್ಮೀಯವಾಗಿ ಸ್ವೀಕರಿಸಿದ ಅಧಿಕಾರಿಗಳು ಮಕ್ಕಳಿಗೆ ಶುಭ ಹಾರೈಸಿ, ಅವರ ಪ್ರತಿಭೆ ಹಾಗೂ ಸೃಜನಶೀಲ ಕಾರ್ಯವನ್ನು ಮೆಚ್ಚಿ ಪ್ರೋತ್ಸಾಹಿಸಿದರು. ಈ ಮೂಲಕ ವಿಶೇಷ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸಂತಸ ಮೂಡಿಸುವ ಅರ್ಥಪೂರ್ಣ ದೀಪಾವಳಿ ಆಚರಣೆಗೆ ಸಾನಿಧ್ಯ ಸಾಕ್ಷಿಯಾಯಿತು.


