PMAY-G ಯೋಜನೆಯಲ್ಲಿ ಆರ್ಥಿಕ ಅವ್ಯವಹಾರದ ಆರೋಪ; ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿಗೆ SDPIಯಿಂದ ಬೃಹತ್ ಪ್ರತಿಭಟನೆ

ಕುಂಬಳೆ : ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ್ (PMAY-G) ಯೋಜನೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರವನ್ನು ಖಂಡಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಬ್ಲಾಕ್ ಪಂಚಾಯತ್ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಯೋಜನೆಯಡಿ ಫಲಾನುಭವಿಗೆ ಲಭಿಸಬೇಕಿದ್ದ ಹಣವನ್ನು ಸಂಬಂಧಪಟ್ಟ ಅಧಿಕಾರಿಯೊಬ್ಬರು ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯವನ್ನು ಖಚಿತಪಡಿಸಬೇಕು ಎಂದು SDPI ಒತ್ತಾಯಿಸಿದೆ.

ಪ್ರತಿಭಟನಾ ಕಾರ್ಯಕ್ರಮದಲ್ಲಿ SDPI ಮಂಜೇಶ್ವರ ಮಂಡಲ ಕಾರ್ಯದರ್ಶಿ ಶಬೀರ್ ಪೆಸೋಟ್ ಸ್ವಾಗತಿಸಿದರು. ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮಂಡಲ ಸಮಿತಿ ಸದಸ್ಯ ಹಾಗೂ ಮಾಜಿ ಬ್ಲಾಕ್ ಪಂಚಾಯತ್ ಸದಸ್ಯ ಅಮೀದ್ ಹೊಸಂಗಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪಕ್ಷದ ಮಂಡಲ ಸಮಿತಿ ಸದಸ್ಯರಾದ ಸೆಕ್ಕರಿಯಾ ಉದ್ಯಾವರ, ಜಯಕುಮಾರ್ ಮತ್ತು ಅನ್ಸಾರ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಬೆಂಬಲ ಸೂಚಿಸಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಶಂಸು ವಂದಿಸಿದರು.

ಯೋಜನೆಯಡಿ ನಡೆದಿರುವ ಹಣಕಾಸಿನ ವ್ಯವಹಾರಗಳು, ಹಣ ವರ್ಗಾವಣೆಯ ಪ್ರಕ್ರಿಯೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೆ, ಸರ್ಕಾರಿ ಅನುದಾನದ ದುರುಪಯೋಗವನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!