ಡಿ. 12ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಮೂರು ದಿನಗಳ ‘ಸಿನರ್ಜಿ’ ಉತ್ಸವ

ಮಂಗಳೂರು:ಶಾಲಾ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ವೈಜ್ಞಾನಿಕ ಚಿಂತನೆ ಹಾಗೂ ತಾಂತ್ರಿಕ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ಡಿ. 12, 13 ಮತ್ತು 14ರಂದು ‘ಸಿನರ್ಜಿ’ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರಲ್ಲಿ ಆರಂಭಗೊಂಡ ‘ಸಿನರ್ಜಿ’ ಉತ್ಸವವು ಈ ಬಾರಿ ನಾಲ್ಕನೇ ಆವೃತ್ತಿಗೆ ಕಾಲಿಡುತ್ತಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆ, ಕ್ರಿಯಾಶೀಲತೆ ಹಾಗೂ ನಾವೀನ್ಯಪೂರ್ಣ ಆಲೋಚನೆಗಳನ್ನು ಪ್ರದರ್ಶಿಸಲು ಈ ಉತ್ಸವ ಉತ್ತಮ ವೇದಿಕೆಯಾಗಲಿದೆ ಎಂದರು.

ಉತ್ಸವದ ಪ್ರಮುಖ ಆಕರ್ಷಣೆಗಳಾಗಿ ನಾಲ್ಕು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅವುಗಳೆಂದರೆ 13ನೇ ಆವೃತ್ತಿಯ ‘ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್’ (SSTH), 9ನೇ ವರ್ಷದ ‘ಡಿಹೋಸ್ಟ್’ (Dehoist), ರೋಬೋ ಸ್ಪರ್ಧೆ ಹಾಗೂ ‘ಏರೋಫಿಲಿಯಾ’ ಏರ್‌ಶೋ. ಈ ಹಿಂದೆ ಪ್ರತ್ಯೇಕ ದಿನಗಳಲ್ಲಿ ನಡೆಯುತ್ತಿದ್ದ ಈ ನಾಲ್ಕು ಪ್ರಮುಖ ಸ್ಪರ್ಧೆಗಳನ್ನು ಈ ಬಾರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಉತ್ಸವದಡಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಒಂದು ವರ್ಷದ ಪರಿಶ್ರಮದಿಂದ ಸಿದ್ಧಪಡಿಸಿದ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ, ತಾಂತ್ರಿಕ ಜ್ಞಾನ ಹಾಗೂ ನವೀನ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದು ಉತ್ಸವದ ಪ್ರಮುಖ ಉದ್ದೇಶವಾಗಿದೆ ಎಂದರು.

ಉತ್ಸವಕ್ಕೆ ಸೀ ಬ್ರೀಜ್ ಮ್ಯಾನೇಜ್‌ಮೆಂಟ್ ವತಿಯಿಂದ ಸುಮಾರು ಎರಡು ಲಕ್ಷ ರೂ.ಗಳ ಬಹುಮಾನ ಮೊತ್ತವನ್ನು ನೀಡಲಾಗುತ್ತಿದೆ. ಅಲ್ಲದೆ, ಭಂಡಾರಿ ಫೌಂಡೇಶನ್ ಹಾಗೂ ಈಸಿ ಇಂಡಸ್ಟ್ರೀಸ್ ಸೇರಿದಂತೆ ವಿವಿಧ ಉದ್ಯಮ ಸಂಸ್ಥೆಗಳು ಶೇ. 75ಕ್ಕೂ ಅಧಿಕ ಪ್ರಮಾಣದ ಧನಸಹಾಯ ಒದಗಿಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಧನೆಗಳಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ವಿವರಿಸಿದರು.

ಡಿ. 12ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಕೆಟಿಸಿ ವ್ಯವಸ್ಥಾಪಕರಾದ ಶ್ರೀ ಸಿದ್ಲಿಂಗಪ್ಪ ಬಿ. ಪೂಜಾರಿ ಹಾಗೂ ವಿವಿಧ ಉದ್ಯಮ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಡಿ. 13ರಂದು ಬೆಳಿಗ್ಗೆ 9 ಗಂಟೆಗೆ ವಿಶೇಷ ಏರ್‌ಶೋ ನಡೆಯಲಿದ್ದು, ಉತ್ಸವದ ಕೊನೆಯ ದಿನ ಸಮಾರೋಪ ಸಮಾರಂಭ ಜರುಗಲಿದೆ.

ಈ ಮೂರು ದಿನಗಳ ಉತ್ಸವದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಡಾ. ಇಂಜಗನೇರಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೃಷ್ಣ ಹೆಗ್ಡೆ, ಡಾ. ಪ್ರಶಾಂತ್ ರಾವ್, ಶಮಂತ್ ರೈ, ಭವಿಷ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!