ಸಾಮರಸ್ಯಕ್ಕೆ ಸಾಕ್ಷಿಯಾದ ‘ದೀಪಾವಳಿ ಜ್ಯೋತಿ ಪರ್ವ’: ಇನಾಯತ್‌ ಅಲಿ ಅಭಿಮಾನಿ ಬಳಗದಿಂದ ಅರ್ಥಪೂರ್ಣ ಆಚರಣೆ

ದೀಪಾವಳಿ ಎಂದರೆ ಕೇವಲ ಮನೆಯಂಗಳದ ದೀಪಗಳ ಸಾಲು ಅಥವಾ ಆಕಾಶದೆತ್ತರಕ್ಕೆ ಸಿಡಿಯುವ ಪಟಾಕಿಗಳ ಸದ್ದು ಮಾತ್ರವಲ್ಲ; ಅದು ಮನಸ್ಸುಗಳನ್ನು ಬೆಸೆಯುವ ಸೌಹಾರ್ದತೆ ಮತ್ತು ಮಾನವೀಯತೆಯ ಮಹೋತ್ಸವವೂ ಆಗಿದೆ ಎಂಬುದನ್ನು ಕಾವೂರು ಜಂಕ್ಷನ್‌ನ ಅಂಬೇಡ್ಕರ್ ಮೈದಾನ ಸಾಬೀತುಪಡಿಸಿತು.

ಇನಾಯತ್ ಅಲಿ ಅಭಿಮಾನಿ ಬಳಗ, ಕಾವೂರು ವತಿಯಿಂದ ಶನಿವಾರ ಸಂಜೆ ಆಯೋಜಿಸಲಾಗಿದ್ದ ‘ದೀಪಾವಳಿ ಜ್ಯೋತಿ ಪರ್ವ’ ಕಾರ್ಯಕ್ರಮವು ಜಾತಿ-ಮತಗಳ ಗಡಿಗಳನ್ನು ಮೀರಿ, ಪ್ರೀತಿ ಮತ್ತು ಸಹೋದರತ್ವದ ನಿಜವಾದ ಸಂದೇಶವನ್ನು ಸಾರುವ ಮೂಲಕ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜನರ ಮನಗೆದ್ದಿತು.

ಧಾರ್ಮಿಕ ಚೌಕಟ್ಟಿನಲ್ಲಿ ಮಾನವೀಯ ಮೌಲ್ಯಗಳ ಸಮ್ಮಿಲನ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಇನಾಯತ್‌ ಅಲಿಯವರ ಮಾರ್ಗದರ್ಶನ ಹಾಗೂ ಸಮ್ಮುಖದಲ್ಲಿ ಜರುಗಿದ ಈ ಸಮಾರಂಭವು ಹಲವು ಅರ್ಥಪೂರ್ಣ ಘಟನೆಗಳಿಗೆ ಸಾಕ್ಷಿಯಾಯಿತು.

ಶಾಸ್ತ್ರೋಕ್ತವಾಗಿ ಗೋ ಪೂಜೆ ನೆರವೇರಿಸುವ ಮೂಲಕ ದೀಪಾವಳಿಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯಲಾಯಿತು. ಇದರ ಜೊತೆಗೆ, ಕೋಮು ಸೌಹಾರ್ದತೆಗೆ ಪ್ರತ್ಯಕ್ಷ ಸಾಕ್ಷಿಯೆಂಬಂತೆ ಇನಾಯತ್‌ ಅಲಿಯವರು, ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಕುಟುಂಬಗಳಿಗೆ ಗೋವುಗಳನ್ನು ದಾನ ಮಾಡಿದರು. ಅಲ್ಲದೆ, ತಲಾ ಇಪ್ಪತ್ತೆಯ್ದು ಸಾವಿರ ರೂಪಾಯಿಗಳಂತೆ ನೂರಕ್ಕೂ ಅಧಿಕ ಬಡ ಕುಟುಂಬಗಳ ಮದುವೆಗಾಗಿ ಆರ್ಥಿಕ ಸಹಾಯ ನೀಡುವ ಮೂಲಕ ಹಬ್ಬಕ್ಕೆ ಮಾನವೀಯ ಅರ್ಥವನ್ನೂ ತಂದುಕೊಟ್ಟರು.

ಸಾಧಕರಿಗೆ ಮತ್ತು ಶ್ರಮಿಕರಿಗೆ ಗೌರವ ಸಮರ್ಪಣೆ

ಸಮಾಜದ ಒಳಿತಿಗಾಗಿ ಹಗಲಿರುಳು ಶ್ರಮಿಸುವ ನಿಸ್ವಾರ್ಥ ಸೇವಕರನ್ನು ಗುರುತಿಸಿ ಗೌರವಿಸಿದ್ದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು, ಊರಿನ ಅಡಿಪಾಯದಂತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಹಾಗೂ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ಹಾಗೂ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು. ಶ್ರಮಿಕರು ಹಾಗೂ ಸಾಧಕರಿಗೆ ಸಲ್ಲಿಸಿದ ಈ ಸನ್ಮಾನ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಸಾಂಸ್ಕೃತಿಕ ವೈಭವ ಮತ್ತು ಸಿಹಿ ಸಂಭ್ರಮ

ಖ್ಯಾತ ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರ ಮಧುರ ಧ್ವನಿಯಲ್ಲಿ ಮೂಡಿಬಂದ ʼಸಂಗೀತ ಸಂಜೆʼ ಕಾರ್ಯಕ್ರಮ ಮೈದಾನದಲ್ಲಿದ್ದ ಪ್ರತಿಯೊಬ್ಬರನ್ನೂ ಸಂತೋಷದ ಕಡಲಲ್ಲಿ ತೇಲಿಸಿತು. ನವೆಂಬರ್‌ ತಿಂಗಳ ಕನ್ನಡ ಕಂಪು ವೇದಿಕೆಯಲ್ಲಿ ಹರಡಿತ್ತು. ರಂಜನೆಯ ಜೊತೆಗೆ ಮನಸ್ಸಿಗೆ ಆಹ್ಲಾದ ನೀಡುವ ನವೀನ್‌ ಸಜ್ಜು ಅವರ ಧ್ವನಿ ಎಲ್ಲರ ಮನಸೂರೆಗೊಂಡಿತು.

ಮಕ್ಕಳಿಗೆ ಪಟಾಕಿ ವಿತರಣೆ, ಸೃಜನಶೀಲ ಗೂಡುದೀಪಗಳ ಸ್ಪರ್ಧೆ, ಅಂಬರದಲ್ಲಿ ಬಣ್ಣಗಳ ಜಾದೂ ಸೃಷ್ಟಿಸಿದ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಇಡೀ ಮೈದಾನಕ್ಕೆ ಮೆರುಗು ನೀಡಿದವು. ಶ್ರೀ ಶಿವಶಕ್ತಿ ಭಜನಾ ವೃಂದದ ಶ್ರದ್ಧಾಭರಿತ ಭಜನೆ, ವಿವಿಧ ಕಲಾ ತಂಡಗಳ ನೃತ್ಯ ರೂಪಕ ಕಾವೂರಿನ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿದವು.

ಕತ್ತಲೆಯನ್ನು ಓಡಿಸಿ ಬೆಳಕನ್ನು ಚೆಲ್ಲುವ ದೀಪಾವಳಿಯ ಶುಭ ಸಂದರ್ಭದಲ್ಲಿ, ಕಾವೂರಿನಲ್ಲಿ ನಡೆದ ಈ ಜ್ಯೋತಿ ಪರ್ವವು ಸಮಾಜದಲ್ಲಿ ಸಾಮರಸ್ಯವನ್ನು ಬೆಸೆಯುವ ಆಚರಣೆಯಾಗಿ ಹೊಮ್ಮಿತು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಪದ್ಮರಾಜ್ ಆರ್. ಪೂಜಾರಿ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮಮತಾ ಗಟ್ಟಿ, ಪುರುಷೋತ್ತಮ ಚಿತ್ರಾಪುರ, ಬಿ.ಎಲ್.ಪಿ. ಪದ್ಮನಾಭ ಕೋಟ್ಯಾನ್, ಆರ್. ಕೆ. ಪೃಥ್ವಿರಾಜ್, ಲಕ್ಷ್ಮೀಶ ಗಬಲಡ್ಕ, ಎಂ. ಜಿ. ಹೆಗಡೆ, ಗಂಗಾಧರ ಹೊಸಬೆಟ್ಟು, ಜಯಶೀಲ ಆದ್ಯಂತಾಯ, ಸುರೇಂದ್ರ ಕಂಬಳಿ, ರೂಪೇಶ್ ರೈ, ಕೃಷ್ಣ ಅಮೀನ್, ಯು. ಪಿ. ಇಬ್ರಾಹಿಂ, ಗಿರೀಶ್ alwa, ಚಂದ್ರಹಾಸ ಅಮೀನ್ ಸೇರಿದಂತೆ ಸ್ಥಳೀಯ ಕಾರ್ಯಕರ್ತರು ಹಾಗೂ ಇನಾಯತ್‌ ಅಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!