ಮಂಗಳೂರು, ನ. 8: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ನಗರದ ಕದ್ರಿ ಪಾರ್ಕ್ ಬಳಿಯ ಶ್ರೀ ಗೋರಕ್ಷನಾಥ ಜ್ಞಾನ ಮಂದಿರ ಸಭಾಂಗಣದಲ್ಲಿ 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.



ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಮಾರು ಮಠದ ಈಶ ವಿಠಲ ಸ್ವಾಮೀಜಿ, ನಮ್ಮ ಬದುಕು ಉತ್ತಮ ಸ್ಥಿತಿಯಲ್ಲಿರಲು ಹೆತ್ತವರು ಹಾಗೂ ಗುರುಗಳ ಮಾರ್ಗದರ್ಶನವೇ ಪ್ರಮುಖ ಕಾರಣವಾಗಿದೆ. ಧರ್ಮ ಎನ್ನುವುದು ಕೇವಲ ಆಚರಣೆಗಳಿಗೆ ಸೀಮಿತವಾಗಿರದೆ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯ ಕಾರ್ಯಕ್ರಮಗಳಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಸರ್ವಧರ್ಮಗಳ ಹಬ್ಬಗಳನ್ನು ಒಗ್ಗೂಡಿಸಿ ಆಚರಿಸುವ ಮೂಲಕ ಐವನ್ ಡಿಸೋಜ ಅವರು ಮಂಗಳೂರಿನ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಪಾಲ್ದನೆ ಚರ್ಚ್ನ ಧರ್ಮಗುರು ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ಬೆಳಕಿನ ಹಬ್ಬವಾದ ದೀಪಾವಳಿಯನ್ನು ಭಾವೈಕ್ಯತೆಯೊಂದಿಗೆ ಆಚರಿಸುತ್ತಿರುವುದು ಸಂತಸದ ವಿಚಾರ. ನಾವೆಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯಿಂದ ಬದುಕುವುದು ಅತ್ಯಂತ ಮುಖ್ಯವಾಗಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಎಚ್. ಹಸನಬ್ಬ ಚಾರ್ಮಾಡಿ ಮಾತನಾಡಿ, ಬಾಲ್ಯ ಹಾಗೂ ಕಾಲೇಜು ದಿನಗಳಿಂದಲೇ ಐವನ್ ಡಿಸೋಜ ಅವರು ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರೊಂದಿಗೆ ಬೆರೆತು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ದೀಪಾವಳಿ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಹುರುಪು ಹಾಗೂ ಸಂತಸವನ್ನು ತರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್, ಭರತನಾಟ್ಯ ಕಲಾವಿದೆ ರೆಮೋನಾ ಇವೆಟ್ಟಾ ಪಿರೇರಾ ಹಾಗೂ ಸಂಗೀತ ನಿರ್ದೇಶಕ ಮತ್ತು ಗಾಯಕ ಗುರುರಾಜ್ ಎಂ.ಬಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪ್ರತಿಭಾ ಸಾಲ್ಯಾನ್, ಪ್ರಗತಿ ಬೇಕಲ್, ಎನ್.ಪಿ. ಮನುರಾಜ್, ಮನೀಷ್ ಬೋಳಾರ್, ಅಮೃತ್ ಕದ್ರಿ, ಜೇಮ್ಸ್ ಪ್ರವೀಣ್, ಅಶ್ರಫ್ ಬೆಂಗ್ರೆ, ಹರ್ಬರ್ಟ್ ಡಿಸೋಜ ಕಡೇಕಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದೀಪಾವಳಿ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಚಿತ್ರಕಲಾ ಸ್ಪರ್ಧೆಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಚಾಲನೆ ನೀಡಿದರು. ಮುಕ್ತ ಭರತನಾಟ್ಯ ಸ್ಪರ್ಧೆಗೆ ಕರ್ನಾಟಕ ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಚಾಲನೆ ನೀಡಿದರು. ಗೂಡುದೀಪ ಸ್ಪರ್ಧೆಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಚಾಲನೆ ನೀಡಿದರು.
ಕಾರ್ಯಕ್ರಮದ ಸಂಚಾಲಕ ಜಿ. ನಾಗೇಂದ್ರ ಕುಮಾರ್ ವಂದಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

