ಸೋನಿಯಾ ಗಾಂಧಿ ಅವರ ಪುಸ್ತಕಕ್ಕೆ ಬಿಜೆಪಿ ಟೀಕೆ: ‘ಬಿಲಾಂಗಿಂಗ್’ ಬದಲು ‘ವೈಟ್‌ವಾಶಿಂಗ್’ ಎಂದು ಹೆಸರಿಡಬೇಕಿತ್ತು ಎಂದ ಸಿ.ಆರ್. ಕೇಶವನ್

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೆನಪುಗಳ ಸಂಕಲನವಾದ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕದ ವಿರುದ್ಧ ಬಿಜೆಪಿ ಟೀಕೆ ವ್ಯಕ್ತಪಡಿಸಿದೆ.ಪುಸ್ತಕಕ್ಕೆ ‘ಬಿಲಾಂಗಿಂಗ್’ (Belonging) ಎಂಬ ಹೆಸರಿನ ಬದಲಿಗೆ ‘ವೈಟ್‌ವಾಶಿಂಗ್’ (Whitewashing) ಎಂದು ಹೆಸರಿಡಬೇಕಿತ್ತು. ಗಾಂಧಿ ಕುಟುಂಬದ ಐತಿಹಾಸಿಕ ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನವನ್ನು ಈ ಪುಸ್ತಕ ಮಾಡಿದೆ ಎಂದು ಬಿಜೆಪಿ ನಾಯಕ ಸಿ.ಆರ್. ಕೇಶವನ್ ಟೀಕಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ತಾನು ಕಣ್ಣೀರು ಹಾಕಿದ್ದಾಗಿ ಸೋನಿಯಾ ಗಾಂಧಿ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸಿಖ್ ವಿರೋಧಿ ಗಲಭೆಗಳ ಸಂದರ್ಭದಲ್ಲಿ ಗುರುದ್ವಾರಗಳ ಮೇಲೆ ದಾಳಿ ನಡೆದಾಗ ಹಾಗೂ ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆದಾಗಲೂ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರೇ ಎಂದು ಕೇಶವನ್ ಪ್ರಶ್ನಿಸಿದ್ದಾರೆ.ಕಾಂಗ್ರೆಸ್ ಪಕ್ಷ ಮಾಡಿದ ದೊಡ್ಡ ತಪ್ಪುಗಳು ಮತ್ತು ಪಾಪಗಳನ್ನು ಮರೆಮಾಚುವ ಪ್ರಯತ್ನವನ್ನು ಈ ಪುಸ್ತಕ ಮಾಡಿದೆ. ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಸೋನಿಯಾ ಗಾಂಧಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಾಗ ಸೋನಿಯಾ ಗಾಂಧಿ ಕನಿಷ್ಠ ಒಂದು ಹನಿಯಾದರೂ ಕಣ್ಣೀರು ಸುರಿಸಿದ್ದರೇ? ಇಂತಹ ಭಯೋತ್ಪಾದಕ ದಾಳಿಗಳಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಧೈರ್ಯದಿಂದ ಪ್ರತಿಕ್ರಿಯಿಸದೆ ಮೌನವಾಗಿದ್ದೇಕೆ? ಈ ಪ್ರಶ್ನೆಗಳಿಗೆ ಸೋನಿಯಾ ಗಾಂಧಿ ಅವರ ಪುಸ್ತಕ ಉತ್ತರ ನೀಡುತ್ತದೆಯೇ ಎಂದು ಸಿ.ಆರ್. ಕೇಶವನ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮಾಡಿದ ಐತಿಹಾಸಿಕ ತಪ್ಪುಗಳನ್ನು ಮತ್ತು ಪಾಪಗಳನ್ನು ದೃಢನಿಶ್ಚಯದಿಂದ ಸರಿಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಶವನ್ ಇದೇ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ನೆನಪುಗಳ ಸಂಕಲನವಾದ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಇಂದು ಬಿಡುಗಡೆಯಾಗುತ್ತಿದೆ. 2004ರಲ್ಲಿ ಪ್ರಧಾನಿ ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿ, ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಶಿಫಾರಸು ಮಾಡಿದ್ದೂ ಸೇರಿದಂತೆ ಹಲವು ಪ್ರಮುಖ ರಾಜಕೀಯ ಘಟನೆಗಳು ಈ ಪುಸ್ತಕದಲ್ಲಿ ಉಲ್ಲೇಖವಾಗಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!