ವಿಶ್ವ ಉರ್ದು ದಿನಾಚರಣೆ: ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆ

ಕಾಸರಗೋಡು: ವಿಶ್ವ ಉರ್ದು ದಿನಾಚರಣೆಯ ಅಂಗವಾಗಿ ತೆಹ್ರೀಕ್-ಎ-ಉರ್ದು ಕೇರಳ ರಾಜ್ಯ ಸಮಿತಿ ಹಾಗೂ ಸರ್ಕಾರಿ ಕಾಲೇಜು ಕಾಸರಗೋಡಿನ ಅರೇಬಿಕ್ ವಿಭಾಗದ ಜಂಟಿ ಆಶ್ರಯದಲ್ಲಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಅಲ್ಲಾಮಾ ಮೊಹಮ್ಮದ್ ಇಕ್ಬಾಲ್ ಅವರ ಜನ್ಮದಿನವಾದ ನವೆಂಬರ್ 9ರಂದು ವಿಶ್ವ ಉರ್ದು ದಿನವನ್ನು ಆಚರಿಸಲಾಗುತ್ತದೆ.

ಎ.ಕೆ.ಎಂ. ಅಶ್ರಫ್ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಷೆಗಳು ಮನುಷ್ಯರನ್ನು ವಿಭಜಿಸುವುದಕ್ಕಲ್ಲ, ಬದಲಾಗಿ ಒಗ್ಗೂಡಿಸುವುದಕ್ಕಾಗಿವೆ. ಭಾರತದ ಬಹುಸಂಸ್ಕೃತಿಯ ಬೆಳವಣಿಗೆಯಲ್ಲಿ ಉರ್ದು ಭಾಷೆಗೆ ಮಹತ್ವದ ಸ್ಥಾನವಿದೆ ಎಂದು ಅವರು ಹೇಳಿದರು. ಜನರಲ್ಲಿ ಸ್ವಾತಂತ್ರ್ಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಹಾಗೂ ವಸಾಹತುಶಾಹಿ ಆಡಳಿತದ ವಿರುದ್ಧದ ಪ್ರತಿಭಟನೆಗಳನ್ನು ಬಲಪಡಿಸುವಲ್ಲಿ ಉರ್ದು ಕವಿತೆಗಳು ಮತ್ತು ಸಾಹಿತ್ಯ ಕೃತಿಗಳು ಮಹತ್ವದ ಪಾತ್ರ ವಹಿಸಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ವಿ.ಎಸ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಕೇರಳ ಉರ್ದು ಟೀಚರ್ಸ್ ಅಸೋಸಿಯೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಲಾಂ ಮಲಯಮ್ಮ ಮುಖ್ಯ ಭಾಷಣ ಮಾಡಿದರು. ತೆಹ್ರೀಕ್-ಎ-ಉರ್ದು ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅಸೀಂ ಮಣಿಮುಂಡ ವಿಷಯ ಮಂಡಿಸಿದರು.

ತೆಹ್ರೀಕ್-ಎ-ಉರ್ದು ಕೇರಳ ರಾಜ್ಯ ಅಧ್ಯಕ್ಷ ಪಿ.കെ.ಸಿ. ಮೊಹಮ್ಮದ್, ಡಾ. ಕೆ.ಕೆ. ಸೈನಲ್ ಆಬಿದ್, ಟಿ. ಅಜೀಸ್, ಎಸ್. ಸುಜಾತ, ಮೊಹಮ್ಮದ್ ಶಾಹಿಲ್ ಖಾನ್, ಡಾ. ಕೆ. ಮೊಹಮ್ಮದಲಿ, ಎಂ.ಪಿ. ಅಬ್ದುರಹ್ಮಾನ್, ದೇವಿಕಾ ಪಣಿಕ್ಕರ್, ಶ್ರೀಕಲಾ, ಇಸ್ಮಾಯಿಲ್ ಅಬೂಬಕ್ಕರ್, ಡಾ. ದಿವ್ಯ, ಒ.ಕೆ. ಶರಣ್ಯ, ಅಬ್ದುಲ್ ಹಕೀಂ ಫೈಝಿ, ಮಾಹಿನ್ ಮಾಸ್ಟರ್, ಶುಕ್ಕೂರು ಹಾಗೂ ಶರೀಫ್ ಕಾಸರಗೋಡು ಉಪಸ್ಥಿತರಿದ್ದು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳೂ ನಡೆದವು.

SHARE
Loading spinner

Leave a Reply

Your email address will not be published. Required fields are marked *

error: Content is protected !!