ಮಂಜೇಶ್ವರ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.

ಪಂಚಾಯತಿನ 7, 8 ಮತ್ತು 9ನೇ ವಾರ್ಡ್ ವ್ಯಾಪ್ತಿಯ ರಸ್ತೆ ಬದಿಯ ಇಕ್ಕೆಡೆಗಳಲ್ಲಿ ಕಾಡುಪೊದರುಗಳು ದೈತ್ಯಾಕಾರದಲ್ಲಿ ಬೆಳೆದು ನಿಂತಿವೆ. ಇದರಿಂದ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತದ ಭೀತಿ ಎದುರಾಗಿದೆ. ಜೊತೆಗೆ ಪೊದರುಗಳಲ್ಲಿ ವಿಷಜಂತುಗಳ ಹಾವಳಿಯೂ ಹೆಚ್ಚಾಗಿದ್ದು, ಕಾಲ್ನಡಿಗೆಯಲ್ಲಿ ಸಾಗುವವರು ಆತಂಕದಲ್ಲಿದ್ದಾರೆ.


ಸಂಬಂಧಪಟ್ಟ ವಾರ್ಡ್ ಸದಸ್ಯರು ಹಾಗೂ ಪಂಚಾಯತ್ ಆಡಳಿತ ಈ ಬಗ್ಗೆ ಗಮನಹರಿಸಿ ಕೂಡಲೇ ಪೊದರುಗಳನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಮತ್ತೊಂದೆಡೆ, ಚೌಕಿ ಬಡಾಜೆ ಪರಿಸರ ಹಾಗೂ ಚೌಕಿ ಬಸ್ ನಿಲ್ದಾಣದ ಪಕ್ಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಗಾಗಿ ಪಂಚಾಯತ್ ಇರಿಸಿರುವ ತೊಟ್ಟಿಗಳಿಗೆ ಮದುವೆ ಹಾಗೂ ಇತರ ಸಮಾರಂಭಗಳ ಕೋಳಿ ತ್ಯಾಜ್ಯ ಸೇರಿದಂತೆ ಹಸಿ ಕಸವನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ಇಡೀ ಪರಿಸರ ದುರ್ಗಂಧಮಯವಾಗಿದೆ.

ಅಲ್ಲದೆ, ಈ ತ್ಯಾಜ್ಯವನ್ನು ಎಳೆದಾಡುವ ಬೀದಿ ನಾಯಿಗಳು, ನಿತ್ಯ ಇದೇ ದಾರಿಯಾಗಿ ಶಾಲೆ ಮತ್ತು ಮದ್ರಸಗಳಿಗೆ ತೆರಳುವ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ತ್ಯಾಜ್ಯ ಎಸೆಯುವವರ ವಿರುದ್ಧ ಪಂಚಾಯತ್ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

