ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ: ಜನವರಿ 6ರಿಂದ 12ರವರೆಗೆ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಮಂಜೇಶ್ವರ : ಇತಿಹಾಸ ಪ್ರಸಿದ್ಧ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ದೇವರು, ಶ್ರೀ ಮಹಾಗಣಪತಿ ದೇವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು.

2027ರ ಜನವರಿ 6ರಿಂದ 12ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರಿದ ಭಾಗವಾಗಿ ಜನವರಿ 13ರಿಂದ 17ರವರೆಗೆ ಶ್ರೀ ಭೂತಬಲಿ, ರಂಗಪೂಜೆ ಉತ್ಸವ ಹಾಗೂ ಶ್ರೀ ಮುಂಡಲ್ತಾಯ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ತಂತ್ರಿವರ್ಯರಾದ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಯವರು ವಹಿಸಿದ್ದರು.ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಬಲರಾಮ ಭಟ್ ಕಾಕುಂಜೆ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಯಾದವ ಬಡಾಜೆ, ಪ್ರಧಾನ ಸಂಚಾಲಕರಾದ ಶ್ರೀ ಹರೀಶ್ ಶೆಟ್ಟಿ ಮಾಡ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಶಂಕರ ಕುಲಾಲ್ ಪಡುಬೈಲು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಚಂದ್ರಮೋಹನ್ ಹೊಳ್ಳ, ಕ್ಷೇತ್ರದ ಮೊಕ್ತೇಸರರಾದ ಶ್ರೀ ರಾಮಚಂದ್ರ ಸುರಿಬೈಲು, ಶ್ರೀ ಸುಕೇಶ್ ಅಲ್ವ ಪುಚ್ಛತ್ತಬೈಲು ಗುತ್ತು ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಲೋಹಿತ್ ಕುಮಾರ್ ಸ್ಫೂರ್ತಿ ನಗರ ಸೇರಿದಂತೆ ಕ್ಷೇತ್ರದ ಪ್ರಮುಖರು, ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


ಸುಮಾರು 1.5 ಕೋಟಿಗೂ ಅಧಿಕ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಈ ಮಹೋತ್ಸವವನ್ನು ಅತ್ಯಂತ ವೈಭವದಿಂದ ಹಾಗೂ ಅಚ್ಚುಕಟ್ಟಾಗಿ ನಡೆಸಲು ಕ್ಷೇತ್ರದ ಆಡಳಿತ ಮಂಡಳಿ ಮತ್ತು ವಿವಿಧ ಸಮಿತಿಗಳು ಸಿದ್ಧತೆ ಕೈಗೊಂಡಿವೆ.



ಕ್ಷೇತ್ರದ ಧಾರ್ಮಿಕ ಪರಂಪರೆ, ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಈ ಮಹೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.


ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಈ ಪುಣ್ಯಮಯ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವದಲ್ಲಿ ಸಮಸ್ತ ಭಕ್ತಾದಿಗಳು ಭಾಗವಹಿಸಿ ದೇವರ ಹಾಗೂ ದೈವಗಳ ಗಂಧಪ್ರಸಾದ ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಆತ್ಮೀಯವಾಗಿ ಆಹ್ವಾನಿಸಿದೆ.

