ಎರಡು ವರ್ಷದಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆ: ಪುಟಾಣಿ ನೈಹ ಸಫಿಯ ನವಾಲ್‌ಗೆ ಎ.ಕೆ.ಪಿ.ಎ. ಗೌರವ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎ.ಕೆ.ಪಿ.ಎ.) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ನ. 14ರಂದು ಕಾಸರಗೋಡಿನ ಎ.ಕೆ.ಪಿ.ಎ. ಜಿಲ್ಲಾ ಕಚೇರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆ ಹಾಗೂ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಕೇವಲ ಎರಡು ವರ್ಷ ವಯಸ್ಸಿನಲ್ಲಿಯೇ ಅಸಾಧಾರಣ ಸಾಧನೆ ಮಾಡಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026’ನಲ್ಲಿ ಸ್ಥಾನ ಪಡೆದ ಪುಟಾಣಿ ಪ್ರತಿಭೆ ನೈಹ ಸಫಿಯ ನವಾಲ್ ಅವರನ್ನು ಗೌರವಿಸಲಾಯಿತು. ಫಾತಿಮತ್ ಹಫ ಅಡ್ಕ ಮತ್ತು ನವಾಲ್ ರಹಿಮಾನ್ ದಂಪತಿಯ ಪುತ್ರಿಯಾದ ನೈಹ ಅವರಿಗೆ ಎ.ಕೆ.ಪಿ.ಎ. ವೆಸ್ಟ್ ಯುನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಸನ್ಮಾನ ಪತ್ರ ನೀಡಿ ಗೌರವಿಸಿದರೆ, ಎ.ಕೆ.ಪಿ.ಎ. ಕಾಸರಗೋಡು ಜಿಲ್ಲಾ ಜತೆ ಕಾರ್ಯದರ್ಶಿ ಮನು ಎಲ್ಲೋರ್ ಅವರು ಹ್ಯಾಂಪರ್ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ನೈಹ ಅವರ ತಾಯಿ ಫಾತಿಮತ್ ಹಫ ಅಡ್ಕ ಅವರು ಮಗುವಿನ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಪುಟ್ಟ ವಯಸ್ಸಿನಲ್ಲಿಯೇ ಗಮನಾರ್ಹ ಸಾಧನೆ ಮಾಡುವ ಮೂಲಕ ನಾಡಿಗೆ ಹೆಮ್ಮೆ ತಂದಿರುವ ನೈಹ ಅವರ ಪ್ರತಿಭೆಯನ್ನು ಶ್ಲಾಘಿಸಿದ ಗಣ್ಯರು, ಮಗುವಿನ ಸಾಧನೆಯ ಹಿಂದೆ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಿದ ಪೋಷಕರು ಮತ್ತು ಕುಟುಂಬದ ಸದಸ್ಯರನ್ನು ವಿಶೇಷವಾಗಿ ಅಭಿನಂದಿಸಿದರು.

ಎ.ಕೆ.ಪಿ.ಎ. ವೆಸ್ಟ್ ಯುನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಕೆ.ಪಿ.ಎ. ಕಾಸರಗೋಡು ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ವೀಡಿಯೋನಿಕ್ಸ್, ಯುನಿಟ್ ಪಿ.ಆರ್.ಒ. ವಿನೋದ್, ಸಮಿತಿ ಸದಸ್ಯ ರತೀಶ್ ರಾಮು ಹಾಗೂ ನೈಹ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಯುನಿಟ್ ಕಾರ್ಯದರ್ಶಿ ಶಾಲಿನಿ ರಾಜ್ ಸ್ವಾಗತಿಸಿ, ಮನು ಎಲ್ಲೋರ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!