ಮಂಗಳೂರು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026, ಕೇರಳ -ಕರ್ನಾಟಕ ಉತ್ಸವ ಮತ್ತು ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ನವoಬರ್ 28 ಮತ್ತು 29 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ರಂಗೇರಲಿದೆ. 28ರಂದು ಬೆಳಿಗ್ಗೆ 9: 00 ಗಂಟೆಗೆ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಪ್ರಾರಂಭವಾಗುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನವನ್ನು ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಮಾಜಿ ಕೇಂದ್ರ ಸಚಿವ ಡಾ .ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸುವರು.

ಬೆಂಗಳೂರು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಕೇರಳ- ಕರ್ನಾಟಕ ಉತ್ಸವವನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್ ಅಶೋಕ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವನ್ನು ಉದ್ಘಾಟಿಸುವರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಕೆಂಗೇರಿ ಬೆಂಗಳೂರು ಇಲ್ಲಿನ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮಿಗಳು ಸರ್ವಾಧ್ಯಕ್ಷತೆ ವಹಿಸುವರು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ರಾಯಚೂರು ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಡಾ .ಶಿವಾನಂದ ಕೆಳಗಿನಮನೆ ಸಹಿತ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು .

ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಕನ್ನಡ ಗ್ರಾಮದಲ್ಲಿ ನಿರ್ಮಿಸಲಾದ ಗೋ – ಕುಟೀರದ ಪ್ರವೇಶೋತ್ಸವ ನೆರವೇರಿಸುವರು ಕೇರಳ- ಕರ್ನಾಟಕ ಭವನದ ಭೂಮಿ ಪೂಜೆ, ಶಿಲಾನ್ಯಾಸವನ್ನು ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜಿ, ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಆದಿ ಚುಂಚನಗಿರಿ ಮಹಾಸಂಸ್ಥಾನದ ಶಂಭುನಾಥ ಸ್ವಾಮೀಜಿ ನಿರ್ವಹಿಸುವರು. ಅಪರಾಹ್ನ ಗಂಟೆ 12.00ರಿಂದ ಶತ ಕವಿಗೋಷ್ಠಿಯನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಕನ್ನಡ ಭಾರತೀಯ ನಿರ್ದೇಶಕ ಡಾ .ನೆಲ್ಲಿಕಟ್ಟೆ ಎಸ್. ಸಿದ್ದೇಶ ಉದ್ಘಾಟಿಸುವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕಿ ಡಾ.ಅನುಸೂಯ ಕ. ಕಾoಬಳೆ ಅಧ್ಯಕ್ಷತೆ ವಹಿಸುವರು .

ಪುಸ್ತಕ ಪ್ರದರ್ಶನ, ಕಲಾಪ್ರದರ್ಶನ, ಯಕ್ಷಗಾನ ವೇಷ-ಭೂಷಣ ಪ್ರದರ್ಶನ ,ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ವಿವಿಧ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ . ಸಂಜೆ 5.30 ರಿಂದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ರಮೇಶ್ ಚಂದ್ರ ಬೆಂಗಳೂರು ಇವರಿಂದ ಸುಗಮ ಸಂಗೀತ ಗಾಯನ ನಡೆಯಲಿದೆ. 29ರಂದು ಬೆಳಿಗ್ಗೆ 9:00 ರಿಂದ ನೂರು ಮಂದಿ ಮಹಿಳಾ ಸಂಕೀರ್ತನಕಾರದಿಂದ ಸಮೂಹ ಭಜನಾ ಗಾಯನ, 10.00 ಗಂಟೆಯಿಂದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ಜರಗಲಿದೆ . ಕೇರಳ ಮತ್ತು ಕರ್ನಾಟಕ ರಾಜ್ಯದ ನೂರು ಮಂದಿ ಮಕ್ಕಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮಕ್ಕಳ ಶತ ಕವಿಗೋಷ್ಠಿ ನಡೆಯಲಿದೆ. ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ. ಎನ್. ಅಶೋಕ್ ಉದ್ಘಾಟಿಸುವರು. ಅಂತರ ರಾಜ್ಯಮಟ್ಟದ ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಪ್ರಶಸ್ತಿ , ವಿವಿಧ ಕ್ಷೇತ್ರದ 36 ಕ್ಷೇತ್ರದ ಸಾಧಕರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ಹಾಗೂ 5 ಕ್ಷೇತ್ರದ ಸಾಧಕರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸುಮಾರು 200 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ಪತ್ರಕರ್ತ ಶ್ರೀನಿವಾಸ ನಾಯಕ್ ಇoದಾಜೆ ಮಂಗಳೂರು ಉದ್ಘಾಟಿಸುವರು. ಪತ್ರಕರ್ತ ಸಿರಿಗೇರಿ ಯರಿಸ್ವಾಮಿ ಬೆಂಗಳೂರು ಅಧ್ಯಕ್ಷತೆ ವಹಿಸುವರು.
ಗಡಿನಾಡು ಹೊರನಾಡು ಅನಿವಾಸಿ ಭಾರತೀಯ ಕನ್ನಡಿಗರು ಕನ್ನಡ ಸಂಘಟನೆಗಳ ಭಾಷಾಭಾoಧವ್ಯ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಮಾಧವ ಎಂ.ಕೆ ಉದ್ಘಾಟಿಸುವರು. ಬೆಳಗಾವಿ ಪತ್ರಕರ್ತ ವಾಯ್ ಮೆಣಸಿಕಾಯಿ ಅಧ್ಯಕ್ಷತೆ ವಹಿಸುವರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್ ಎಲ್ ಭಾರದ್ವಾಜ್ ಬೇಕಲ್ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಂಜುನಾಥ್ ಎಸ್ ರೇವಣ್ಕರ್, ನ್ಯಾಯವಾದಿ ರಮ್ಯ ಅರುಣ್, ಚಲನಚಿತ್ರ ನಿರ್ಮಾಪಕಿ ಮೀರಾ ಪಡಿಯಾರ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

