
ಕುಂಬಳೆ : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ‘ಟೇಕ್ ಎ ಬ್ರೇಕ್’ ವಿಶ್ರಾಂತಿ ಕೇಂದ್ರವು ಉದ್ಘಾಟನೆಯಾದ ಕೇವಲ ಮೂರು ತಿಂಗಳಲ್ಲೇ ಮುಚ್ಚಲ್ಪಟ್ಟಿದೆ.
ಕಳೆದ ಆಗಸ್ಟ್ನಲ್ಲಿ ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿ ಅವರಿಂದ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದ್ದ ಈ ಕೇಂದ್ರವು, ಪ್ರಸ್ತುತ ನೀರಿನ ಸೌಲಭ್ಯವಿಲ್ಲದೆ ಮುಚ್ಚಲ್ಪಟ್ಟಿದೆ.

ಆರಂಭದಲ್ಲಿ ಕುಂಬಳೆ ಪೈ ಕಂಪೌಂಡ್ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವ ರಾಜೀವ್ಗಾಂಧಿ ಯೋಜನೆಯಿಂದ ಇಲ್ಲಿಗೆ ನೀರು ಒದಗಿಸಲಾಗುತ್ತಿತ್ತು. ಆದರೆ ಸ್ಥಳೀಯ ನಿವಾಸಿಗಳಿಗೇ ನೀರಿನ ಕೊರತೆ ಎದುರಾದ ಕಾರಣ, ವಿಶ್ರಾಂತಿ ಕೇಂದ್ರಕ್ಕೆ ನೀರಿನ ಸರಬರಾಜು ಕಡಿತಗೊಂಡಿತು. ಇದರಿಂದಾಗಿ ಕಟ್ಟಡವನ್ನು ತೆರೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

40 ಲಕ್ಷ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಿ ಕೇವಲ ಕಟ್ಟಡ ನಿರ್ಮಿಸಿದರೆ ಸಾಲದು, ಅದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಂಚಾಯತ್ ವತಿಯಿಂದ ಒಂದು ಕೊಳವೆ ಬಾವಿ ತೋಡಿಸಿ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಿತ್ತಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಸಚಿವರ ಮಾತುಗಳಿಗೆ ವಿರುದ್ಧವಾಗಿ ಇಂದು ಕಟ್ಟಡವು ಉಪಯೋಗಶೂನ್ಯವಾಗಿ ಬಿದ್ದುಕೊಂಡಿದೆ. ಈ ಕುರಿತು ಸಚಿವರಿಗೆ ಮನವಿ ಸಲ್ಲಿಸಲು ಸ್ಥಳೀಯರು ಸಿದ್ಧತೆ ನಡೆಸುತ್ತಿದ್ದಾರೆ

