ಮಣಿಪಾಲ: ಜರ್ಮನಿಯ ಬರ್ಲಿನ್ನಲ್ಲಿ ನಡೆದ IEEE ಜರ್ಮನಿ-ಭಾರತ ನಾವೀನ್ಯತೆ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಸಮ್ಮೇಳನ (GICITE 2026)ದಲ್ಲಿ ಮಣಿಪಾಲದ ಮಾಹೆ (MAHE) ವಿಶ್ವವಿದ್ಯಾನಿಲಯದ ಮಣಿಪಾಲ ತಾಂತ್ರಿಕ ಸಂಸ್ಥೆಯ (MIT) ಸಿವಿಲ್ ಮತ್ತು ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ MIT ಅಧ್ಯಾಯದ IEEE ಸದಸ್ಯರಾದ ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.


ಬರ್ಲಿನ್ನ ಟೆಕ್ನಿಷೆ ವಿಶ್ವವಿದ್ಯಾಲಯದಲ್ಲಿ ನಡೆದ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ‘ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ಉಪಗ್ರಹ ಚಿತ್ರಣದ ಮೂಲಕ ಯಂತ್ರ ಕಲಿಕೆ ಆಧಾರಿತ ಮೂಲಸೌಕರ್ಯ ಸ್ಥಿತಿಗತಿ ಮೌಲ್ಯಮಾಪನ’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು.
ತಮ್ಮ ಪ್ರಸ್ತುತಿಯಲ್ಲಿ ಯಂತ್ರ ಕಲಿಕೆ (Machine Learning), ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಮತ್ತು ಉಪಗ್ರಹ ಚಿತ್ರಣ ತಂತ್ರಜ್ಞಾನಗಳ ಸಮನ್ವಯವು ಮೂಲಸೌಕರ್ಯಗಳ ಸ್ಥಿತಿಗತಿಯನ್ನು ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡಲು ನೆರವಾಗುತ್ತದೆ ಎಂಬುದನ್ನು ವಿವರಿಸಿದರು. ಈ ತಂತ್ರಜ್ಞಾನಗಳ ಬಳಕೆಯಿಂದ ಮೂಲಸೌಕರ್ಯಗಳ ದುರ್ಬಲ ಪ್ರದೇಶಗಳನ್ನು ನಿಖರವಾಗಿ ಗುರುತಿಸುವುದು, ಅವುಗಳ ಕ್ಷೀಣಿಸುವಿಕೆಯ ಮಾದರಿಗಳನ್ನು ಮುಂಚಿತವಾಗಿ ಅಂದಾಜಿಸುವುದು ಹಾಗೂ ವಿವಿಧ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಸ್ಥಿತಿಗತಿಯನ್ನು ದೃಶ್ಯರೂಪದಲ್ಲಿ ವಿಶ್ಲೇಷಿಸುವುದು ಸಾಧ್ಯವಾಗುತ್ತದೆ. ಇದರಿಂದ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು, ನಿರ್ವಹಣಾ ಯೋಜನೆ ರೂಪಿಸಲು, ಸಂಪನ್ಮೂಲಗಳ ಸದ್ಬಳಕೆ ಮಾಡಲು ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ಬಾಲಕೃಷ್ಣ ಎಸ್ ಮದ್ದೋಡಿ
ಅವರ ‘ಪರಿಸರ ವಿಜ್ಞಾನ ಮತ್ತು ವಿಪತ್ತು ನಿರ್ವಹಣೆ’ (Environmental Science and Disaster Management) ಕೃತಿಯ ಎರಡನೇ ಆವೃತ್ತಿಯನ್ನೂ GICITE 2026 ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಶೋಧನೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಣಿಪಾಲದ ಸಾಧನೆಗೆ ಮತ್ತೊಂದು ಹೆಗ್ಗಳಿಕೆ ತಂದಿರುವ ಡಾ. ಮಡ್ಡೋಡಿ ಅವರ ಈ ಸಾಧನೆ ಗಮನ ಸೆಳೆದಿದೆ.

