1,453 ವಿದ್ಯಾರ್ಥಿ ಆವಿಷ್ಕಾರಗಳ ಅನಾವರಣ: ಜಿಎಂಯು MASE 2026ಕ್ಕೆ 10 ಸಾವಿರಕ್ಕೂ ಅಧಿಕ ಮಂದಿಯ ಭೇಟಿ

ಅಜ್ಮಾನ್, ಯುಎಇ: ಯುವಜನರಲ್ಲಿ ವೈಜ್ಞಾನಿಕ ಚಿಂತನೆ, ಸಂಶೋಧನಾ ಮನೋಭಾವ ಮತ್ತು ನವೀನ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತುಂಬೆ ಸಮೂಹದ ಅಂಗಸಂಸ್ಥೆಯಾದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು) ಆಯೋಜಿಸಿದ 20ನೇ ಆವೃತ್ತಿಯ ವಾರ್ಷಿಕ ವೈದ್ಯಕೀಯ ಮತ್ತು ವಿಜ್ಞಾನ ಪ್ರದರ್ಶನ (MASE 2026) ಯಶಸ್ವಿಯಾಗಿ ನಡೆಯಿತು. ಜಿಎಂಯು ಕ್ಯಾಂಪಸ್‌ನಲ್ಲಿ ನಡೆದ ಈ ಪ್ರದರ್ಶನಕ್ಕೆ ಯುಎಇಯ 100 ಶಾಲೆಗಳ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಂದರ್ಶಕರು ಭೇಟಿ ನೀಡಿದರು.

ಈ ಬಾರಿಯ ಪ್ರದರ್ಶನದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಒಟ್ಟು 1,453 ವೈಜ್ಞಾನಿಕ ಪ್ರಾಜೆಕ್ಟ್‌ಗಳು, ಸಂಶೋಧನಾ ಪೋಸ್ಟರ್‌ಗಳು, ಉದ್ಯಮ ಪರಿಕಲ್ಪನೆಗಳು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಆವಿಷ್ಕಾರಗಳನ್ನು ಪ್ರದರ್ಶಿಸಿದರು. ಇದರೊಂದಿಗೆ ಆನ್‌ಲೈನ್ ಮೂಲಕ 493 ಮಂದಿ ಭಾಗವಹಿಸಿದ್ದರು.

ಪ್ರದರ್ಶನದಲ್ಲಿ 540 ವೈಜ್ಞಾನಿಕ ಪ್ರಾಜೆಕ್ಟ್‌ಗಳು, 419 ಸಂಶೋಧನಾ ಪೋಸ್ಟರ್‌ಗಳು, 310 ಉದ್ಯಮ ಪರಿಕಲ್ಪನೆಗಳು ಹಾಗೂ 184 ಎಐ ಆವಿಷ್ಕಾರಗಳು ಗಮನ ಸೆಳೆದವು. ವಿದ್ಯಾರ್ಥಿಗಳು ತಮ್ಮ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸುವುದರ ಜೊತೆಗೆ, ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದ ತಜ್ಞರ ಮುಂದೆ ಅವುಗಳ ಉದ್ದೇಶ, ಕಾರ್ಯವಿಧಾನ ಮತ್ತು ಪ್ರಯೋಜನಗಳನ್ನು ವಿವರಿಸಿ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಶೇಷವಾಗಿ ಎಐ ಆಧಾರಿತ ಆವಿಷ್ಕಾರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು. ಕೃತಕ ಬುದ್ಧಿಮತ್ತೆಯನ್ನು ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರದ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧನವಾಗಿ ವಿದ್ಯಾರ್ಥಿಗಳು ಬಳಸಿಕೊಂಡಿರುವುದು ಗಮನಾರ್ಹವಾಗಿತ್ತು. ಇದೇ ವೇಳೆ, 310 ಉದ್ಯಮ ಪರಿಕಲ್ಪನೆಗಳು ವಿದ್ಯಾರ್ಥಿಗಳಲ್ಲಿ ಸಂಶೋಧನೆಯೊಂದಿಗೆ ಉದ್ಯಮಶೀಲತೆಯ ಆಸಕ್ತಿಯೂ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸಿದವು.

ವೈದ್ಯರು, ಪ್ರಾಧ್ಯಾಪಕರು ಹಾಗೂ ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರದ ತಜ್ಞರನ್ನೊಳಗೊಂಡ ತೀರ್ಪುಗಾರರ ತಂಡವು ವಿವಿಧ ವಿಭಾಗಗಳ ಪ್ರಾಜೆಕ್ಟ್‌ಗಳನ್ನು ಮೌಲ್ಯಮಾಪನ ಮಾಡಿತು. ಇದರಲ್ಲಿ ಉಮ್ ಅಲ್ ಕುವೈನ್‌ನ ಮೆಟ್ರೋಪಾಲಿಟನ್ ಇಂಟರ್‌ನ್ಯಾಷನಲ್ ಇಂಡಿಯನ್ ಪ್ರೈವೇಟ್ ಸ್ಕೂಲ್ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಶಾರ್ಜಾದ ಘುಬೈಬಾದ ಶಾರ್ಜಾ ಇಂಡಿಯನ್ ಸ್ಕೂಲ್ ರನ್ನರ್ ಅಪ್ ಪ್ರಶಸ್ತಿಗೆ ಪಾತ್ರವಾಯಿತು.

ಜಿಎಂಯು ಸಂಸ್ಥಾಪಕ ಅಧ್ಯಕ್ಷ ಹಾಗೂ ತುಂಬೆ ಸಮೂಹದ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರ ದೂರದೃಷ್ಟಿಯ ಪರಿಕಲ್ಪನೆಯಡಿ ಎರಡು ದಶಕಗಳ ಹಿಂದೆ ವೈದ್ಯಕೀಯ ಮತ್ತು ವಿಜ್ಞಾನ ಪ್ರದರ್ಶನಕ್ಕೆ ಚಾಲನೆ ನೀಡಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಶ್ವವಿದ್ಯಾಲಯದ ವಾತಾವರಣವನ್ನು ಪರಿಚಯಿಸುವುದು, ಅವರಲ್ಲಿ ವೈಜ್ಞಾನಿಕ ಆಸಕ್ತಿ ಬೆಳೆಸುವುದು ಹಾಗೂ ಭವಿಷ್ಯದ ವೈದ್ಯರು, ಸಂಶೋಧಕರು ಮತ್ತು ಆರೋಗ್ಯ ಕ್ಷೇತ್ರದ ಉದ್ಯಮಿಗಳನ್ನು ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

2012ರಲ್ಲಿ ನಾಲ್ಕು ಎಮಿರೇಟ್‌ಗಳ 15 ಶಾಲೆಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಆರಂಭಗೊಂಡಿದ್ದ ಈ ಪ್ರದರ್ಶನ ಇಂದು ಯುಎಇಯ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ಬೆಳೆದಿದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ತುಂಬೆ ಮೆಡಿಸಿಟಿಗೆ ಭೇಟಿ ನೀಡಿ ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯ ವಿಜ್ಞಾನ ಕ್ಷೇತ್ರಗಳ ಬಗ್ಗೆ ಪ್ರಾಯೋಗಿಕ ಅರಿವು ಪಡೆದುಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಶ್ವವಿದ್ಯಾಲಯದ ಅಧ್ಯಾಪಕರೊಂದಿಗೆ ಸಂವಾದ ನಡೆಸಲು, ಪ್ರಯೋಗಾಲಯಗಳು ಹಾಗೂ ವೈದ್ಯಕೀಯ ಸಿಮ್ಯುಲೇಶನ್ ಸೌಲಭ್ಯಗಳನ್ನು ವೀಕ್ಷಿಸಲು ಮತ್ತು ವೈದ್ಯಕೀಯ, ಆರೋಗ್ಯ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳ ವೃತ್ತಿ ಅವಕಾಶಗಳನ್ನು ತಿಳಿದುಕೊಳ್ಳಲು ಈ ಪ್ರದರ್ಶನ ಉತ್ತಮ ವೇದಿಕೆಯಾಗಿದೆ. ಎರಡು ದಶಕಗಳ ಪಯಣದಲ್ಲೂ ಯುವ ಪ್ರತಿಭೆಗಳಿಗೆ ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಳ್ಳಲು ಹಾಗೂ ಭವಿಷ್ಯದ ಗುರಿಯನ್ನು ಆತ್ಮವಿಶ್ವಾಸದಿಂದ ರೂಪಿಸಿಕೊಳ್ಳಲು MASE ಮಹತ್ವದ ಕೊಡುಗೆ ನೀಡುತ್ತಿದೆ.

ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯು ತುಂಬೆ ಸಮೂಹದ ಶೈಕ್ಷಣಿಕ ವಿಭಾಗವಾಗಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಬಯೋಮೆಡಿಕಲ್ ಸೈನ್ಸಸ್, ಆರೋಗ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಶಿಕ್ಷಣ ನೀಡುತ್ತಿದೆ. ತುಂಬೆ ಅಕಾಡೆಮಿಕ್ ಹೆಲ್ತ್ ಸಿಸ್ಟಂನ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಿಎಂಯುಯಲ್ಲಿ 111ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

‘ಜಗತ್ತು ಕಲಿಯಲು ಬರುವ ತಾಣ’ (Where the World Comes to Learn) ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಜಿಎಂಯುನಲ್ಲಿ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ www.gmu.ac.ae ಸಂಪರ್ಕಿಸಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!