ಕುಂಬಳೆ : ಮಂಜೇಶ್ವರ ಬ್ಲಾಕ್ ಪಂಚಾಯತ್‌ನ ಪಿಎಂಎವೈ (ಪ್ರಧಾನಮಂತ್ರಿ ಆವಾಸ್ ಯೋಜನೆ) ವಸತಿ ಯೋಜನೆಯಡಿ 15 ಫಲಾನುಭವಿಗಳಿಗೆ ಲಭಿಸಬೇಕಿದ್ದ ಬ್ಲಾಕ್ ಪಂಚಾಯತ್‌ನ ಅನುದಾನವನ್ನು ಸಿಬ್ಬಂದಿಯೊಬ್ಬರು ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವ ಪ್ರಕರಣದಲ್ಲಿ ಹಾಗೂ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯಲ್ಲೂ ಲೋಪವಾಗಿದೆ ಎಂದು ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ . ಸೈಫುಲ್ಲ ತಂಘಳ್ ಆರೋಪಿಸಿದ್ದಾರೆ.
ಕುಂಬಳೆ ಪ್ರೆಸ್ ಫೋರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದರು.

ಪ್ರಾಥಮಿಕ ಪರಿಶೀಲನೆಯಲ್ಲಿ ತಲಾ ₹1.12 ಲಕ್ಷದಂತೆ ಒಟ್ಟು ₹16.80 ಲಕ್ಷ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವುದು ಪತ್ತೆಯಾಗಿದೆ. ಪಿಎಂಎವೈ ವಿಭಾಗದ ಕ್ಲರ್ಕ್ ರಾಮದಾಸ್ ಈ ಹಣಕಾಸು ಅಕ್ರಮ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಹಾಗೂ ಇತರ ವಿವರಗಳನ್ನು ದಾಖಲಿಸಿದ ಬಳಿಕ ಬ್ಯಾಂಕ್ ಖಾತೆಯ ಮಾಹಿತಿಯನ್ನು ಬದಲಾಯಿಸಿ, ತಮ್ಮದೇ ಖಾತೆಯನ್ನು ಸೇರಿಸಿ ಹಣ ವರ್ಗಾಯಿಸಿರುವುದಾಗಿ ತಿಳಿದುಬಂದಿದೆ.

ಮೂರು ಹೊಸ ಫಲಾನುಭವಿಗಳು ಹಾಗೂ 12 ಹಳೆಯ ಫಲಾನುಭವಿಗಳು ಸೇರಿದಂತೆ ಒಟ್ಟು 15 ಮಂದಿಗೆ ಸೇರಬೇಕಿದ್ದ ಹಣವನ್ನು ಈ ರೀತಿ ವರ್ಗಾಯಿಸಲಾಗಿದೆ.
ಬ್ಲಾಕ್ ಪಂಚಾಯತ್ ಕಾರ್ಯದರ್ಶಿಯವರ ಪರಿಶೀಲನೆಯ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಫಲಾನುಭವಿಗಳ ನೋಂದಣಿ ಪುಸ್ತಕವನ್ನು ನೀಡುವಂತೆ ಕೇಳಿದರೂ ಸಿಬ್ಬಂದಿ ನೀಡದ ಹಿನ್ನೆಲೆಯಲ್ಲಿ ಕಾರ್ಯದರ್ಶಿಯವರೇ ನೇರವಾಗಿ ಪರಿಶೀಲನೆ ನಡೆಸಿದ್ದರು. ದಾಖಲೆಗಳಲ್ಲಿ 2025 ಎಂದು ನಮೂದಿಸಿದ್ದ ವರ್ಷವನ್ನು 2026 ಎಂದು ತಿದ್ದಿರುವ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ನಡೆಸಿದಾಗ ಹಣಕಾಸು ಅಕ್ರಮ ಪತ್ತೆಯಾಗಿದೆ.
ವಿಷಯ ಗಮನಕ್ಕೆ ಬಂದ ತಕ್ಷಣ ಕಾರ್ಯದರ್ಶಿ ಹಾಗೂ ಆಡಳಿತ ಸಮಿತಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಣವನ್ನು ಹಿಂದಿರುಗಿಸುವುದಾಗಿ ಸಿಬ್ಬಂದಿ, ಅವರ ಪತ್ನಿ ಹಾಗೂ ಮತ್ತೊಬ್ಬರು ಭರವಸೆ ನೀಡಿದ್ದರು. ಇದರ ಭಾಗವಾಗಿ ಸಿಬ್ಬಂದಿ ಒಂದು ಲಕ್ಷ ರೂಪಾಯಿ ಹಿಂದಿರುಗಿಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು.

ಉಳಿದ ಹಣವನ್ನು ವಸೂಲಿ ಮಾಡುವುದರ ಜೊತೆಗೆ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲೂ ಲೋಪದ ಆರೋಪ
ಕಳೆದ ಮೇ ತಿಂಗಳಿನಲ್ಲಿ ರಾಮದಾಸ್ ಮಂಜೇಶ್ವರ ಬ್ಲಾಕ್ ಪಂಚಾಯತ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಅವರ ನೇಮಕಾತಿ ಆದೇಶ ಅಧಿಕೃತವಾಗಿ ಕಚೇರಿಗೆ ತಲುಪಿರಲಿಲ್ಲ. ಸಿಬ್ಬಂದಿಯೇ ನೇರವಾಗಿ ಕಚೇರಿಗೆ ಬಂದು ಆದೇಶದ ಪ್ರತಿಯನ್ನು ನೀಡಿದ್ದರು ಎಂದು ಅಧ್ಯಕ್ಷರು ಆರೋಪಿಸಿದರು.
ನಂತರ ನಡೆಸಿದ ವಿಚಾರಣೆಯಲ್ಲಿ, ಈ ಹಿಂದೆ ಕೆಲಸ ಮಾಡಿದ್ದ ಕಚೇರಿಯಲ್ಲಿ ಸುಮಾರು ಅರ್ಧ ಕೋಟಿ ರೂಪಾಯಿ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದ ಆರೋಪ ಎದುರಿಸಿದ್ದರು ಹಾಗೂ ಅಮಾನತು ಸೇರಿದಂತೆ ಶಿಸ್ತು ಕ್ರಮಗಳಿಗೂ ಒಳಗಾಗಿದ್ದರು ಎಂಬ ಮಾಹಿತಿ ಲಭಿಸಿದೆ. ಆದರೆ ಹೊಸ ನೇಮಕಾತಿ ಆದೇಶದಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಿರಲಿಲ್ಲ ಎಂದು ಆರೋಪಿಸಿದರು.
ಹಿಂದಿನ ಹಣಕಾಸು ಅಕ್ರಮ ಹಾಗೂ ಶಿಸ್ತು ಕ್ರಮಗಳ ವಿಚಾರಗಳನ್ನು ಮರೆಮಾಚಿ ನೇಮಕಾತಿ ನೀಡಿರುವಲ್ಲಿ ನಿರ್ದೇಶನಾಲಯದ ಅಧಿಕಾರಿಗಳ ಲೋಪವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅಧ್ಯಕ್ಷರು ಆಗ್ರಹಿಸಿದರು.

ಹಣಕಾಸು ಅಕ್ರಮಗಳ ಆರೋಪ ಎದುರಿಸುವ ಹಾಗೂ ಶಿಸ್ತು ಕ್ರಮಗಳಿಗೆ ಒಳಗಾದ ಸಿಬ್ಬಂದಿಯನ್ನು ಕಾಸರಗೋಡು ಜಿಲ್ಲೆಗೆ ವರ್ಗಾವಣೆ ಮಾಡುವ ಮೂಲಕ ಜಿಲ್ಲೆ ಮತ್ತು ಇಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳ ವಿರುದ್ಧ ತಾರತಮ್ಯ ತೋರುವ ಪ್ರವೃತ್ತಿಯನ್ನು ಕೊನೆಗೊಳಿಸಬೇಕು ಎಂದು ಯು.ಕೆ . ಸೈಫುಲ್ಲ ತಂಘಳ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಕಮಲಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹನೀಫ್, ಮೋಹನ್ ರೈ ಹಾಗೂ ಸದಸ್ಯ ಅಝೀಝ್ ಮೆರಿಕೆ ಉಪಸ್ಥಿತರಿದ್ದರು.

