ಪತ್ವಾಡಿಯಲ್ಲಿ ಕಲಾ ಸ್ಪರ್ಧೆಗಳಿಗೆ ಚಾಲನೆ: ಶಾಸಕ ಎಕೆಎಂ ಅಶ್ರಫ್ ಉದ್ಘಾಟನೆ
ಪತ್ವಾಡಿ: 18ನೇ SKJM ಕಾಸರಗೋಡು ಜಿಲ್ಲಾ ಮಂಜೇಶ್ವರ ವಲಯ ಮುಸಾಬಖಾದ ಅಂಗವಾಗಿ ಆಯೋಜಿಸಲಾಗಿರುವ ಕಲಾ ಸ್ಪರ್ಧೆಗಳಿಗೆ ಪತ್ವಾಡಿ ಮುನೀರುಲ್ ಇಸ್ಲಾಂ ಮದ್ರಸದಲ್ಲಿ ಭವ್ಯ ಚಾಲನೆ ದೊರೆಯಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ವಿದ್ಯಾರ್ಥಿಗಳ ಕಲಾ ಮತ್ತು ಸಾಹಿತ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹಾಗೂ ಅವರ ಸೃಜನಶೀಲ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಸಾಬಖಾ ಆಯೋಜಿಸಲಾಗಿದೆ. ಎಂಟು ರೇಂಜ್ಗಳ ವಿವಿಧ ಮದ್ರಸಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಧಾರ್ಮಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಕಲಾತ್ಮಕ ಹಾಗೂ ಸಾಂಸ್ಕೃತಿಕ ಪ್ರತಿಭೆಗಳನ್ನು ಬೆಳೆಸುವಲ್ಲಿ ಇಂತಹ ಸ್ಪರ್ಧಾ ವೇದಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನದೊಂದಿಗೆ ಮುಸಾಬಖಾ ಉತ್ಸಾಹಭರಿತವಾಗಿ ಆರಂಭಗೊಂಡಿತು.

ಸ್ವಾಗತ ಸಮಿತಿ ಅಧ್ಯಕ್ಷ ಅಲಿ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಅಬ್ದುಲ್ ಜಬ್ಬಾರ್ ಪಳ್ಳಂ ಸ್ವಾಗತಿಸಿದರು.
ಸಮಸ್ತ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ, ಸ್ಥಳೀಯ ಖತೀಬ್ ಹನೀಫ್ ದಾರಿಮಿ, ಕಜೆ ಫೈಝಿ, ಯು.ಕೆ . ಯೂಸುಫ್, ಇಸ್ಮಾಯಿಲ್ ಅಸ್ನವಿ, ಅಝೀಝ್ ಮೆರಿಕೆ, ಲತೀಫ್ ಅರಬಿ, ನೌಶೀಫ್ ನುಜೂಮಿ ಹಾಗೂ ಅಲಿ ಪತ್ವಾಡಿ ಮಾತನಾಡಿದರು.


