
ಕಾಸರಗೋಡು: ಜಾರ್ಖಂಡ್ನ ಬಿರ್ಸಾ ಮುಂಡಾ, ವಯನಾಡಿನ ತಲಕ್ಕಲ್ ಚಂದು ಸೇರಿದಂತೆ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರನ್ನು ಹೊಸ ಪೀಳಿಗೆಗೆ ಪರಿಚಯಿಸಿದ್ದು ಬಿಜೆಪಿ ಸೇರಿದಂತೆ ರಾಷ್ಟ್ರೀಯ ಚಳವಳಿಗಳು ಎಂದು ಎಂ.ಎಲ್. ಅಶ್ವಿನಿ ಹೇಳಿದರು.

ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15ನ್ನು ‘ಜನಜಾತೀಯ ಗೌರವ ದಿವಸ್’ ಆಗಿ ಆಚರಿಸಲು ನಿರ್ಧರಿಸುವ ಮೂಲಕ ನರೇಂದ್ರ ಮೋದಿ ಸರ್ಕಾರವು ಬಿರ್ಸಾ ಮುಂಡಾ ಅವರ ತ್ಯಾಗಮಯ ಜೀವನಕ್ಕೆ ದೊಡ್ಡ ಗೌರವವನ್ನು ನೀಡಿದೆ ಎಂದು ಅವರು ತಿಳಿಸಿದರು. ಎಸ್.ಟಿ. ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಆಯೋಜಿಸಲಾಗಿದ್ದ ‘ಜನಜಾತೀಯ ಗೌರವ ದಿವಸ್’ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು

ಪಳಶ್ಶಿ ರಾಜನ ಅಡಿಯಲ್ಲಿ ತಲಕ್ಕಲ್ ಚಂದು ಅವರ ಕುರಿಚ್ಯ ಪಡೆಯು ನಡೆಸಿದ ಬ್ರಿಟಿಷ್ ವಿರೋಧಿ ಗೆರಿಲ್ಲಾ ಹೋರಾಟವು ಅಸಮಾನವಾದುದು, ಆದರೆ ಈ ಹೋರಾಟಗಳ ಇತಿಹಾಸಕ್ಕೆ ನಮ್ಮ ಪಠ್ಯಪುಸ್ತಕಗಳಲ್ಲಿ ಅರ್ಹವಾದ ಪ್ರಾಮುಖ್ಯತೆ ಸಿಗದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಆರು ದಶಕಗಳ ಕಾಲ ನಿರ್ಲಕ್ಷಿಸಿದ್ದ ಬುಡಕಟ್ಟು ಪ್ರದೇಶಗಳಲ್ಲಿ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು ಮತ್ತು ಬುಡಕಟ್ಟು ಪ್ರದೇಶಗಳನ್ನು ಮಾವೋವಾದಿ ಮುಕ್ತಗೊಳಿಸಿದ್ದು ನರೇಂದ್ರ ಮೋದಿ ಸರ್ಕಾರ ಎಂದು ಅಶ್ವಿನಿ ಬೆಟ್ಟು ಮಾಡಿದರು.

ಬುಡಕಟ್ಟು ಪ್ರದೇಶಗಳನ್ನು ಸ್ವಾವಲಂಬಿಯನ್ನಾಗಿಸಲು ಮತ್ತು ಆರ್ಥಿಕವಾಗಿ ಮೇಲೆತ್ತಲು ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಬುಡಕಟ್ಟು ವರ್ಗಗಳ ಕಲ್ಯಾಣವನ್ನು ಖಾತ್ರಿಪಡಿಸುವ ಮೂಲಕ ‘ವಿಕಸಿತ ಭಾರತ’ ಎಂಬ ಗುರಿಯತ್ತ ದೇಶವು ವೇಗವಾಗಿ ಮುನ್ನಡೆಯುತ್ತಿದೆ ಎಂದು ಅಶ್ವಿನಿ ಹೇಳಿದರು.

ಕಾರ್ಯಕ್ರಮದಲ್ಲಿ ಭಗವಾನ್ ಬಿರ್ಸಾ ಮುಂಡಾ ಪ್ರಶಸ್ತಿ ವಿಜೇತ ಸಂಜೀವ ಪುಳಿಕೂರ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶಿಬು ಪಾಣತ್ತೂರು, ಟಿ.ಡಿ. ಭರತನ್, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್ ಕಾರಕ್ಕೋಡ್, ಜಿಲ್ಲಾ ಕಾರ್ಯದರ್ಶಿ ಸನೀಶ್ ಮತ್ತಿತರರು ಮಾತನಾಡಿದರು.

