ಕಾಲ ಕಳೆಯುತ್ತಿದೆ…
ತಿಂಗಳುಗಳು ಉರುಳುತ್ತಿವೆ…
ಋತುಗಳು ಬದಲಾಗುತ್ತಿವೆ…
ಒಂದೊಂದೇ ಎಲೆಗಳು ಉದುರುತ್ತಿವೆ…
ಒಮ್ಮೆ ಹಸಿರಿನಿಂದ ನಳನಳಿಸುತ್ತಿದ್ದ
ನನ್ನ ಮೈಮಾಟ ಮಂಕಾಗುತ್ತಿದೆ,
ಚಿಗುರೊಡೆದ ಕೊಂಬೆಗಳಲ್ಲೀಗ
ಬರಿದಾದ ಮೌನ ಆವರಿಸುತ್ತಿದೆ…

ನನ್ನ ಸೌಂದರ್ಯ ಕಳೆದುಹೋಗುತ್ತಿದೆ,
ನನ್ನ ಯೌವನ ಮುದುಡುತ್ತಿದೆ,
ನನ್ನ ಅಸ್ತಿತ್ವವೇ ಅಳಿಸಿಹೋಗಬಹುದೆಂಬ
ಭಯವೂ ಕಾಡುತ್ತಿದೆ…
ಆದರೂ…
ನಾನು ಕುಸಿದಿಲ್ಲ,
ನಾನು ಸೋತಿಲ್ಲ,
ಬಿರುಗಾಳಿಗೂ ಬಗ್ಗದೆ
ಇನ್ನೂ ಗಟ್ಟಿಯಾಗಿ ನಿಂತಿದ್ದೇನೆ!
ಏಕೆ ಗೊತ್ತೇ?
ನನ್ನ ಭರವಸೆ ಇರುವುದು
ನನ್ನ ಹಸಿರಾದ ಎಲೆಗಳಲ್ಲಲ್ಲ,
ನನ್ನನ್ನು ಅಲಂಕರಿಸುವ
ಸುಂದರವಾದ ಕೊಂಬೆಗಳಲ್ಲೂ ಅಲ್ಲ…

ಬದಲಾಗಿ…
ಕಣ್ಣಿಗೆ ಕಾಣದ,
ಮಣ್ಣಿನ ಆಳದಲ್ಲಿ ಮೌನವಾಗಿ
ನನ್ನನ್ನು ಹಿಡಿದಿಟ್ಟಿರುವ
ನನ್ನ ಗಟ್ಟಿಯಾದ ಬೇರುಗಳಲ್ಲಿ!
ಏಕೆಂದರೆ…
ಎಲೆಗಳು ಉದುರಬಹುದು,
ಕೊಂಬೆಗಳು ಮುರಿಯಬಹುದು,
ಸೌಂದರ್ಯ ಮರೆಯಾಗಬಹುದು…
ಆದರೆ ಬೇರುಗಳಲ್ಲಿ ಜೀವವಿದ್ದರೆ
ಮತ್ತೆ ಚಿಗುರೊಡೆಯುವ ಭರವಸೆ ಇದ್ದೇ ಇರುತ್ತದೆ!

ರೇಷ್ಮಾ ಉಮೇಶ
ಶಿಕ್ಷಕರು ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ
