ದೇವರಿಗಿಂತ ಮಾನವೀಯತೆ ದೊಡ್ಡದು!

ಮನುಷ್ಯನ ಬದುಕಿನಲ್ಲಿ ನಂಬಿಕೆ ಎನ್ನುವುದು ಸಹಜ. ನಂಬಿಕೆ ಬದುಕಿಗೆ ಧೈರ್ಯ ನೀಡಬೇಕು, ಸಂಕಷ್ಟದಲ್ಲಿ ಆತ್ಮವಿಶ್ವಾಸ ತುಂಬಬೇಕು, ಸಮಾಜದಲ್ಲಿ ಪ್ರೀತಿ, ಕರುಣೆ, ಸಹಬಾಳ್ವೆ ಮತ್ತು ಮಾನವೀಯತೆಯನ್ನು ಬೆಳೆಸಬೇಕು. ಆದರೆ ಅದೇ ನಂಬಿಕೆ ಪ್ರಶ್ನಿಸುವ ಶಕ್ತಿಯನ್ನು ಕಸಿದುಕೊಂಡು, ವೈಚಾರಿಕ ಪ್ರಜ್ಞೆಯನ್ನು ಮರೆಮಾಚಿ, ಮನುಷ್ಯನನ್ನು ಮೂಢನಂಬಿಕೆಯ ಕತ್ತಲೆಗೆ ತಳ್ಳಿದರೆ ಅಂತಹ ನಂಬಿಕೆಯನ್ನು ನಾವು ವಿಮರ್ಶಿಸಲೇಬೇಕು. ಏಕೆಂದರೆ ನಂಬಿಕೆ ಮನುಷ್ಯನ ಒಳಿತಿಗಾಗಿ ಇರಬೇಕೇ ಹೊರತು ಮನುಷ್ಯನ ವಿವೇಚನೆಯನ್ನು ನಾಶಮಾಡುವುದಕ್ಕಾಗಿ ಅಲ್ಲ.

ನಮ್ಮ ಸಮಾಜದ ಮುಂದೆ ಕೆಲವು ಸರಳವಾದ ಉದಾಹರಣೆಗಳು ಗಂಭೀರವಾದ ಪ್ರಶ್ನೆಗಳನ್ನು ಇಡುತ್ತವೆ. ಅವುಗಳಲ್ಲಿ ಎರಡು ಉದಾಹರಣೆಗಳು ನಮ್ಮನ್ನು ಆಳವಾಗಿ ಚಿಂತಿಸುವಂತೆ ಮಾಡುತ್ತವೆ. ಮೊದಲನೆಯದು, ಕಳ್ಳ ದೇವರಿಗೆ ಹೆದರುವುದಿಲ್ಲ; ಅವನು ಹೆದರುವುದು ಮನುಷ್ಯರಿಗೆ, ಕಾನೂನಿಗೆ ಮತ್ತು ಶಿಕ್ಷೆಗೆ ಮಾತ್ರ. ಎರಡನೆಯದು, ದೇವಸ್ಥಾನದ ಹೊರಗಡೆ ಭಿಕ್ಷೆ ಬೇಡುವ ಭಿಕ್ಷುಕ ದೇವರ ಮುಂದೆ ನಿಂತು ಭಿಕ್ಷೆ ಬೇಡುವುದಿಲ್ಲ; ಬದಲಾಗಿ ಅಲ್ಲಿಗೆ ಬರುವ ಮನುಷ್ಯರ ಮುಂದೆ ಕೈಚಾಚುತ್ತಾನೆ. ಏಕೆಂದರೆ ಅವನಿಗೆ ಹಸಿವಾದಾಗ ಅನ್ನ ನೀಡುವುದು ದೇವರ ಮೂರ್ತಿಯಲ್ಲ, ಮನುಷ್ಯನೇ ಎಂಬ ಬದುಕಿನ ವಾಸ್ತವ ಅನುಭವವಿದೆ. ಈ ಎರಡು ಉದಾಹರಣೆಗಳು ನಮ್ಮ ಸಮಾಜದ ನಂಬಿಕೆ ಮತ್ತು ವಾಸ್ತವ ಬದುಕಿನ ನಡುವಿನ ಅಂತರವನ್ನು ಪ್ರಶ್ನಿಸುತ್ತವೆ.

ಒಂದು ಕ್ಷಣ ಯೋಚಿಸಿ, ದೇವರು ಸರ್ವಶಕ್ತ, ಸರ್ವವ್ಯಾಪಿ, ಎಲ್ಲವನ್ನೂ ನೋಡುತ್ತಾನೆ ಎಂದು ನಂಬುವ ಸಮಾಜದಲ್ಲಿ ಕಳ್ಳತನ ಮಾಡುವ ವ್ಯಕ್ತಿ ದೇವರ ಭಯದಿಂದ ಹಿಂದೆ ಸರಿಯುವುದಿಲ್ಲ. ಆದರೆ ಪೊಲೀಸ್ ಇಲಾಖೆ, ಕಾನೂನು ಮತ್ತು ನ್ಯಾಯಾಲಯದ ಶಿಕ್ಷೆಯ ಭಯ ಅವನನ್ನು ಕಾಡುತ್ತದೆ. ಇದರಿಂದ ಮನುಷ್ಯ ನಿರ್ಮಿಸಿದ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಯ ಪ್ರಭಾವವನ್ನು ನಾವು ಅರ್ಥಮಾಡಿಕೊಳ್ಳಬಹುದು. ದೇವಸ್ಥಾನಕ್ಕೆ ರಾತ್ರಿ ಬೀಗ ಹಾಕುವುದು ಕೂಡ ಇದೇ ವಾಸ್ತವವನ್ನು ತೋರಿಸುತ್ತದೆ. ದೇವರ ಮೇಲಿನ ನಂಬಿಕೆ ಇದ್ದರೂ ದೇವಸ್ಥಾನದ ಆಸ್ತಿಯನ್ನು ರಕ್ಷಿಸಲು ಮನುಷ್ಯ ಭದ್ರತಾ ವ್ಯವಸ್ಥೆ ಮಾಡುತ್ತಾನೆ. ಹಾಗಾದರೆ ನಮ್ಮ ಬದುಕಿನ ಸುರಕ್ಷತೆ ಮತ್ತು ವ್ಯವಸ್ಥೆಯಲ್ಲಿ ಮನುಷ್ಯನ ಜವಾಬ್ದಾರಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರಿಯಬೇಕಲ್ಲವೇ?

ಇನ್ನೊಂದು ಉದಾಹರಣೆ ಇನ್ನೂ ಹೆಚ್ಚು ಅರ್ಥಪೂರ್ಣವಾಗಿದೆ. ದೇವಸ್ಥಾನದ ಮುಂದೆ ಭಿಕ್ಷೆ ಬೇಡುವ ಬಡವನನ್ನು ಗಮನಿಸಿ. ಅವನು ದೇವರ ಮೂರ್ತಿಯ ಮುಂದೆ ನಿಂತು, ನನಗೆ ಒಂದು ಹೊತ್ತಿನ ಊಟ ಕೊಡು ಎಂದು ಕೇಳುವುದಿಲ್ಲ. ಬದಲಾಗಿ ದೇವಸ್ಥಾನಕ್ಕೆ ಬರುವ ಭಕ್ತರ ಮುಂದೆ ಕೈಚಾಚಿ, ಅಮ್ಮಾ, ಅಯ್ಯಾ, ಏನಾದರೂ ಕೊಡಿ ಎಂದು ಬೇಡುತ್ತಾನೆ. ಇಲ್ಲಿ ಒಂದು ವೈಚಾರಿಕ ಪ್ರಶ್ನೆ ಮೂಡುತ್ತದೆ. ಭಿಕ್ಷುಕನಿಗೂ ತನ್ನ ಹಸಿವನ್ನು ನೀಗಿಸುವವರು ಮನುಷ್ಯರೇ ಎಂಬ ಅರಿವಿದೆ. ದೇವರ ಮೂರ್ತಿಯಿಂದ ನೇರವಾಗಿ ಅನ್ನ ಸಿಗುವುದಿಲ್ಲ; ಮನುಷ್ಯನ ಕರುಣೆಯಿಂದಲೇ ಆಹಾರ ದೊರೆಯುತ್ತದೆ ಎಂಬುದು ಅವನ ಬದುಕಿನ ಅನುಭವ. ಹಾಗಾದರೆ ದೇವರಿಗಿಂತ ಮನುಷ್ಯನೇ ವಾಸಿ ಎಂಬ ಪ್ರಶ್ನೆ ನಮ್ಮ ಮುಂದೆ ನಿಲ್ಲುವುದಿಲ್ಲವೇ? ಇದು ದೇವರ ನಂಬಿಕೆಯನ್ನು ಅವಹೇಳನ ಮಾಡುವ ಮಾತಲ್ಲ; ಮನುಷ್ಯನಲ್ಲಿರುವ ಮಾನವೀಯ ಶಕ್ತಿಯ ಮಹತ್ವವನ್ನು ನೆನಪಿಸುವ ಚಿಂತನೆಯಾಗಿದೆ.

ದೇವರಿಗೆ ಕಾಣಿಕೆ ಹಾಕಲು ಸಾವಿರಾರು ರೂಪಾಯಿ ಖರ್ಚು ಮಾಡುವವರು, ತಮ್ಮ ಕಣ್ಣೆದುರಿನ ಹಸಿದವನಿಗೆ ಒಂದು ಹೊತ್ತಿನ ಊಟ ನೀಡಲು ಹಿಂದೇಟು ಹಾಕುವುದು ಯಾವ ರೀತಿಯ ಭಕ್ತಿ? ದೇವರ ಹೆಸರಿನಲ್ಲಿ ಚಿನ್ನ, ಬೆಳ್ಳಿ, ವಜ್ರಗಳನ್ನು ಅರ್ಪಿಸುವ ಸಮಾಜದಲ್ಲಿ ಬಡವನಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ದೊರೆಯದಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಯ ವೈರುಧ್ಯವಲ್ಲವೇ? ಹಸಿದವನಿಗೆ ಅನ್ನ ನೀಡುವುದು, ಬಾಯಾರಿದವನಿಗೆ ನೀರು ಕೊಡುವುದು, ಅಸಹಾಯಕರಿಗೆ ನೆರವಾಗುವುದು ನಿಜವಾದ ಮಾನವ ಧರ್ಮವಲ್ಲವೇ?

ಮನುಷ್ಯನಿಗೆ ದೇವರ ಮೇಲಿನ ನಂಬಿಕೆ ಇರಬಹುದು. ಆದರೆ ಆ ನಂಬಿಕೆ ಇನ್ನೊಬ್ಬ ಮನುಷ್ಯನ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಬೇಕು. ದೇವರ ಪೂಜೆ ಮಾಡುವ ಕೈಗಳು ಅನ್ಯಾಯದ ವಿರುದ್ಧವೂ ಧ್ವನಿ ಎತ್ತಬೇಕು. ದೇವಸ್ಥಾನದಲ್ಲಿ ತಲೆಬಾಗುವ ಮನಸ್ಸು ಬಡವರ, ದೀನದಲಿತರ ಮತ್ತು ಶೋಷಿತರ ನೋವಿಗೂ ಮಿಡಿಯಬೇಕು. ಇಲ್ಲದಿದ್ದರೆ ನಮ್ಮ ಭಕ್ತಿ ಕೇವಲ ಬಾಹ್ಯ ಪ್ರದರ್ಶನವಾಗಿ ಉಳಿಯುತ್ತದೆ.

ಇಂದಿಗೂ ನಮ್ಮ ಸಮಾಜದಲ್ಲಿ ಅನೇಕ ಮೂಢನಂಬಿಕೆಗಳು ಜೀವಂತವಾಗಿವೆ. ಗ್ರಹಣದ ಸಂದರ್ಭದಲ್ಲಿ ಆಹಾರ ಸೇವಿಸಬಾರದು, ಅನಾರೋಗ್ಯಕ್ಕೆ ವೈದ್ಯರ ಬದಲಾಗಿ ಮಂತ್ರ-ತಂತ್ರಗಳನ್ನು ಅವಲಂಬಿಸಬೇಕು, ಮಾಟಮಂತ್ರದಿಂದ ಸಮಸ್ಯೆಗಳು ಪರಿಹಾರವಾಗುತ್ತವೆ, ಜಾತಕ ಮತ್ತು ಗ್ರಹಗಳ ದೋಷದಿಂದಲೇ ಬದುಕಿನ ಎಲ್ಲ ಸಂಕಷ್ಟಗಳು ಬರುತ್ತವೆ ಎಂಬ ನಂಬಿಕೆಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ಕೆಲವರು ಜನರ ಭಯ ಮತ್ತು ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜನರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ.

ರೋಗ ಬಂದಾಗ ಆಸ್ಪತ್ರೆಗೆ ಹೋಗಬೇಕು, ವೈದ್ಯರ ಸಲಹೆ ಪಡೆಯಬೇಕು. ಕೃಷಿಯಲ್ಲಿ ಬೆಳೆಗಳಿಗೆ ರೋಗ ಬಂದಾಗ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕು. ಬರಗಾಲ ಬಂದಾಗ ಮಳೆಗಾಗಿ ಪೂಜೆ ಮಾಡುವುದರ ಜೊತೆಗೆ ಮಳೆನೀರು ಕೊಯ್ಲು, ಕೆರೆಗಳ ಪುನರುಜ್ಜೀವನ, ಅಂತರ್ಜಲ ಸಂರಕ್ಷಣೆ ಮತ್ತು ಅರಣ್ಯ ಬೆಳೆಸುವ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಹುಡುಕುವುದೇ ನಿಜವಾದ ಪ್ರಗತಿಯ ಮಾರ್ಗ.

ಮೂಢನಂಬಿಕೆ ಮತ್ತು ಧಾರ್ಮಿಕ ನಂಬಿಕೆ ಎರಡನ್ನೂ ಒಂದೇ ದೃಷ್ಟಿಯಿಂದ ನೋಡಬಾರದು. ಪ್ರತಿಯೊಬ್ಬರಿಗೂ ತಮ್ಮ ಧರ್ಮ, ಸಂಪ್ರದಾಯ ಮತ್ತು ವೈಯಕ್ತಿಕ ನಂಬಿಕೆಗಳನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಆದರೆ ಯಾವುದೇ ನಂಬಿಕೆ ಮನುಷ್ಯನ ಸ್ವಾತಂತ್ರ್ಯ, ಘನತೆ, ಸಮಾನತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಧಕ್ಕೆ ತರಬಾರದು. ಸಂವಿಧಾನದ 51ಎ(ಹೆಚ್) ವಿಧಿಯು ವೈಜ್ಞಾನಿಕ ಮನೋಭಾವ, ಮಾನವೀಯತೆ, ವಿಚಾರಶೀಲತೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಮೂಲಭೂತ ಕರ್ತವ್ಯವೆಂದು ತಿಳಿಸುತ್ತದೆ.

12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಮೂಲಕ ಸಮಾಜದಲ್ಲಿ ಹೊಸ ಚಿಂತನೆಯ ಬೀಜ ಬಿತ್ತಿದರು. ಜಾತಿ, ವರ್ಗ, ಲಿಂಗಭೇದಗಳನ್ನು ಮೀರಿ ಪ್ರತಿಯೊಬ್ಬ ಮನುಷ್ಯನಿಗೂ ಗೌರವಯುತ ಬದುಕು ಸಿಗಬೇಕು ಎಂಬ ಆಶಯವನ್ನು ಸಾರಿದರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯ ಮಹತ್ವವನ್ನು ಸಾರಿದರು. ದಾಸೋಹದ ಮೂಲಕ ದುಡಿಮೆಯ ಫಲ ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂದು ಬೋಧಿಸಿದರು. ಅವರ ವಚನಗಳ ಆಶಯದಲ್ಲಿ ಮನುಷ್ಯನ ನಡೆ, ನುಡಿ ಮತ್ತು ನೈತಿಕ ಬದುಕಿಗೆ ಮಹತ್ವವಿದೆ.

ನಾವು ಧರ್ಮವನ್ನು ಮಾನವೀಯತೆಯೊಂದಿಗೆ ಬೆಸೆಯಬೇಕು. ದೇವರ ಹೆಸರಿನಲ್ಲಿ ದ್ವೇಷ ಬೆಳೆಸುವುದಕ್ಕಿಂತ ಪ್ರೀತಿಯನ್ನು ಹಂಚಬೇಕು. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವುದಕ್ಕಿಂತ ಸಹಬಾಳ್ವೆಯ ಸೇತುವೆ ನಿರ್ಮಿಸಬೇಕು. ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರಗಳಿಗೆ ಹೋಗುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಧಾರ್ಮಿಕ ಸ್ಥಳಗಳಿಗಿಂತಲೂ ಮನುಷ್ಯನ ಹೃದಯದಲ್ಲಿ ಮಾನವೀಯತೆ ನೆಲೆಸುವುದು ಮುಖ್ಯ.

ಮಕ್ಕಳಿಗೆ ಬಾಲ್ಯದಿಂದಲೇ ಪ್ರಶ್ನಿಸುವ ಗುಣ, ವೈಜ್ಞಾನಿಕ ಚಿಂತನೆ, ಪರಿಸರ ಪ್ರೀತಿ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಹಿರಿಯರು ಹೇಳಿದ್ದೆಲ್ಲ ಸತ್ಯವೆಂದು ಕುರುಡಾಗಿ ಒಪ್ಪಿಕೊಳ್ಳದೆ, ಪ್ರತಿಯೊಂದು ವಿಚಾರದ ಹಿಂದಿರುವ ಕಾರಣವನ್ನು ಅರಿಯುವ ಶಿಕ್ಷಣ ನೀಡಬೇಕು. ಪ್ರಶ್ನಿಸುವುದು ತಪ್ಪಲ್ಲ; ಪ್ರಶ್ನಿಸದೆ ಎಲ್ಲವನ್ನೂ ಒಪ್ಪಿಕೊಳ್ಳುವುದೇ ಅಪಾಯಕಾರಿ. ವೈಚಾರಿಕತೆ ಎಂದರೆ ಧರ್ಮವನ್ನು ದ್ವೇಷಿಸುವುದಲ್ಲ, ಸತ್ಯವನ್ನು ಅರಿಯಲು ಪ್ರಯತ್ನಿಸುವುದು.

ಕೊನೆಯದಾಗಿ ನಾವು ಒಂದು ವಿಷಯವನ್ನು ಮರೆಯಬಾರದು. ದೇವರಿದ್ದಾನೆಯೇ ಇಲ್ಲವೇ ಎಂಬ ಚರ್ಚೆಗಿಂತ ಮನುಷ್ಯನಲ್ಲಿ ಮಾನವೀಯತೆ ಇದೆಯೇ ಎಂಬ ಪ್ರಶ್ನೆ ಇಂದು ಹೆಚ್ಚು ಮುಖ್ಯವಾಗಿದೆ. ದೇವಸ್ಥಾನದ ಬಾಗಿಲಿಗೆ ಬೀಗ ಹಾಕುವ ಮೊದಲು ನಮ್ಮ ಮನಸ್ಸಿನ ಬಾಗಿಲು ಬಡವರಿಗೆ, ಅಸಹಾಯಕರಿಗೆ ಮತ್ತು ಹಸಿದವರಿಗೆ ತೆರೆದಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇವರಿಗೆ ಹೂವು ಅರ್ಪಿಸುವುದಕ್ಕಿಂತ ನೋವಿನಲ್ಲಿರುವ ಮನುಷ್ಯನ ಕಣ್ಣೀರು ಒರೆಸುವುದು ಶ್ರೇಷ್ಠವಾದ ಕೆಲಸ.

ಕಳ್ಳನಿಗೆ ಕಾನೂನಿನ ಭಯವಿದೆ, ಭಿಕ್ಷುಕನಿಗೆ ಮನುಷ್ಯನ ಕರುಣೆಯ ನಿರೀಕ್ಷೆಯಿದೆ. ಈ ಎರಡೂ ಉದಾಹರಣೆಗಳು ನಮ್ಮನ್ನು ಒಂದೇ ಸತ್ಯದ ಕಡೆಗೆ ಕರೆದೊಯ್ಯುತ್ತವೆ. ಮನುಷ್ಯನ ಬದುಕಿನಲ್ಲಿ ಮನುಷ್ಯನ ಪಾತ್ರ ಅತ್ಯಂತ ಮಹತ್ವದ್ದು. ಆದ್ದರಿಂದ ದೇವರ ಮೇಲಿನ ನಂಬಿಕೆ ಇರಲಿ, ಆದರೆ ಮನುಷ್ಯನ ಮೇಲಿನ ಪ್ರೀತಿ ಮತ್ತು ವಿಶ್ವಾಸ ಕಳೆದುಕೊಳ್ಳಬಾರದು. ಮೂಢನಂಬಿಕೆಯ ಕತ್ತಲೆಯಿಂದ ಹೊರಬಂದು ವೈಚಾರಿಕ ಪ್ರಜ್ಞೆಯ ಬೆಳಕಿನತ್ತ ಸಾಗೋಣ. ಅಂಧಾನುಕರಣೆಯನ್ನು ಬಿಟ್ಟು ಪ್ರಶ್ನಿಸುವ ಮನೋಭಾವ ಬೆಳೆಸೋಣ. ಧರ್ಮದ ಸಾರವಾದ ದಯೆ, ಕರುಣೆ, ಪ್ರೀತಿ ಮತ್ತು ಸಮಾನತೆಗೆ ಆದ್ಯತೆ ನೀಡೋಣ.

ಏಕೆಂದರೆ ಮನುಷ್ಯನನ್ನು ಪ್ರೀತಿಸದ ಭಕ್ತಿ ಅಪೂರ್ಣ; ಮಾನವೀಯತೆಯಿಲ್ಲದ ಧರ್ಮ ನಿರರ್ಥಕ. ದೇವರ ಹೆಸರಿನಲ್ಲಿ ಮಾಡುವ ಆರಾಧನೆಗಿಂತ ಮನುಷ್ಯನ ಸಂಕಷ್ಟಕ್ಕೆ ಸ್ಪಂದಿಸುವ ಸೇವೆ ಶ್ರೇಷ್ಠ. ದೇವರನ್ನು ನಂಬುವವರು ದೇವರನ್ನು ನಂಬಲಿ, ಆದರೆ ಮನುಷ್ಯನನ್ನು ಮರೆಯಬಾರದು. ದೇವರಿಗಿಂತ ಮಾನವೀಯತೆ ದೊಡ್ಡದು ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಲಿ ಎಂಬುವುದೇ ಈ ಲೇಖನದ ಆಶಯ.


ಲೇಖಕರು: ಸಂಗಮೇಶ ಎನ್. ಜವಾದಿ,
ಬರಹಗಾರರು, ಪರಿಸರವಾದಿ, ಹೋರಾಟಗಾರರು,
ಬೀದರ್ ಜಿಲ್ಲೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!