ನಗರಸಭೆ, ಮಹಾನಗರ ಪಾಲಿಕೆ, ಪುರಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ಗಳು ಕೇವಲ ಆಡಳಿತ ಕಚೇರಿಗಳಲ್ಲ. ಅವು ಜನರ ದೈನಂದಿನ ಬದುಕಿನೊಂದಿಗೆ ನೇರ ಸಂಬಂಧ ಹೊಂದಿರುವ ಆಡಳಿತ ವ್ಯವಸ್ಥೆಗಳು. ರಸ್ತೆ, ಕುಡಿಯುವ ನೀರು, ಕಸ ನಿರ್ವಹಣೆ, ಬೀದಿ ದೀಪ, ಆರೋಗ್ಯ ಮತ್ತು ಸಾರ್ವಜನಿಕ ಸ್ವಚ್ಛತೆಯಂತಹ ಮೂಲಭೂತ ಸೌಲಭ್ಯಗಳು ಇವುಗಳ ಕಾರ್ಯಕ್ಷಮತೆಯ ಮೇಲೆ ನಿಂತಿವೆ. ಆದರೆ ಕರ್ನಾಟಕದ ಅನೇಕ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದಿದ್ದರೂ ಚುನಾವಣೆಗಳು ನಡೆಯದೆ ಉಳಿದಿರುವುದು ಕೇವಲ ಆಡಳಿತಾತ್ಮಕ ವಿಳಂಬವಲ್ಲ. ಅದು ಪ್ರಜಾಪ್ರಭುತ್ವದ ಮೂಲ ಆತ್ಮವನ್ನೇ ದುರ್ಬಲಗೊಳಿಸುವ ಅಪಾಯಕಾರಿ ಬೆಳವಣಿಗೆ.

ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ಗಳ ಅವಧಿ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲೇ ಮುಕ್ತಾಯಗೊಂಡಿದ್ದರೂ, ಚುನಾವಣೆ ನಡೆಸುವ ವಿಚಾರದಲ್ಲಿ ಆಗಿನ ಸರಕಾರ ತೋರಿದ ವಿಳಂಬ ಧೋರಣೆಯನ್ನೇ ಇಂದಿನ ಕಾಂಗ್ರೆಸ್ ಸರಕಾರವೂ ಮುಂದುವರಿಸುತ್ತಿದೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿದೆ. ಸರಕಾರ ಬದಲಾದರೂ ಸ್ಥಳೀಯ ಆಡಳಿತದ ವಿಚಾರದಲ್ಲಿ ನಿರ್ಲಕ್ಷ್ಯದ ಧೋರಣೆ ಬದಲಾಗದಿರುವುದು ವಿಪರ್ಯಾಸ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರಕ್ಕೆ ನೀಡುವ ಆದ್ಯತೆಯಷ್ಟು ಮಹತ್ವ ಸ್ಥಳೀಯ ಆಡಳಿತ ವ್ಯವಸ್ಥೆಯ ಬಲವರ್ಧನೆಗೆ ಸಿಗುತ್ತಿಲ್ಲ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸರಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆದಷ್ಟು ಬೇಗ ನಡೆಸಬೇಕಿತ್ತು. ಸ್ಥಳೀಯ ಆಡಳಿತವು ಜನಸೇವೆಗೆ, ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಮತ್ತು ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಅತ್ಯುತ್ತಮ ಅವಕಾಶ. ಆದರೆ ಕಾಂಗ್ರೆಸ್ ಕೂಡ ಬಿಜೆಪಿ ಅನುಸರಿಸಿದ ಅದೇ ನಿರ್ಲಕ್ಷ್ಯದ ಹಾದಿಯನ್ನು ತುಳಿದಂತಿದೆ.
2023ರಲ್ಲೇ ಘೋಷಣೆಯಾಗಬೇಕಿದ್ದ ನಿಗಮ ಮಂಡಳಿಗಳ ನಿರ್ದೇಶಕರ ನೇಮಕಾತಿ ಈಗಷ್ಟೇ ನಡೆದಿರುವುದು ಕೂಡ ಇದೇ ನಿರ್ಲಕ್ಷ್ಯದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಸರಕಾರದ ಅವಧಿಯಲ್ಲಿ ಇನ್ನು ಉಳಿದಿರುವುದು ಕೇವಲ ಒಂದು ವರ್ಷ. ಪಕ್ಷಕ್ಕಾಗಿ ಅಹೋರಾತ್ರಿ ಶ್ರಮಿಸುವ ಕಾರ್ಯಕರ್ತರನ್ನು ಈ ರೀತಿ ಕಡೆಗಣಿಸುವುದೇಕೆ?

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ವಿವಿಧ ಮೀಸಲಾತಿ ವರ್ಗಗಳ ಪಟ್ಟಿಗಳು ಈಗಾಗಲೇ ಪ್ರಕಟವಾಗಿವೆ. ಆದರೂ ಸ್ಥಳೀಯ ರಾಷ್ಟ್ರೀಯ ಪಕ್ಷಗಳ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಮಾಜಿ ಶಾಸಕರಿಗೆ ಈ ಹಂಚಿಕೆ ಸಂಪೂರ್ಣ ಸಮಾಧಾನ ತಂದಂತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹಾಗೂ ಅಧಿಕಾರ ಹಂಚಿಕೆಯ ವಿಚಾರದಲ್ಲಿ ನಡೆಯುತ್ತಿರುವ ಒಳಜಗಳಗಳು ಚುನಾವಣೆಗೆ ಮತ್ತಷ್ಟು ಅಡ್ಡಿಯಾಗುವ ಲಕ್ಷಣಗಳಿವೆ.
ಮೀಸಲಾತಿ ಯಾವುದೇ ವರ್ಗಕ್ಕೆ ದೊರೆತರೂ, ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲುವ ಆತ್ಮವಿಶ್ವಾಸ ರಾಜಕೀಯ ನಾಯಕರಿಗಿರಬೇಕು. ತಾವು ಹಿಂದೆ ಸ್ಪರ್ಧಿಸಿದ ಕ್ಷೇತ್ರದಲ್ಲೇ ಅವಕಾಶ ಸಿಕ್ಕರೆ ಮಾತ್ರ ಗೆಲ್ಲುತ್ತೇವೆ ಎಂಬ ಮನೋಭಾವ ಸರಿಯಲ್ಲ. ಜನರ ವಿಶ್ವಾಸ ಮತ್ತು ಪಕ್ಷದ ಸಂಘಟನಾ ಬಲವೇ ಗೆಲುವಿನ ಆಧಾರವಾಗಬೇಕು. ಸರಕಾರ ಚುನಾವಣೆ ನಡೆಸಲು ಸಿದ್ಧವಿದ್ದರೂ, ಸ್ಥಳೀಯ ನಾಯಕರ ವೈಯಕ್ತಿಕ ಹಿತಾಸಕ್ತಿ ಮತ್ತು ಕ್ಷೇತ್ರದ ಮೇಲಿನ ಪಟ್ಟು ಚುನಾವಣೆಗೆ ಅಡ್ಡಿಯಾಗುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಇದರ ಹಿಂದೆ ಜನಸೇವೆಗಿಂತ ಜಾತಿ ಆಧಾರಿತ ಗೆಲುವಿನ ಲೆಕ್ಕಾಚಾರಕ್ಕೆ ಆದ್ಯತೆ ನೀಡುವ ರಾಜಕೀಯ ಮನೋಭಾವವೂ ಇರಬಹುದು. ವಾಸ್ತವವಾಗಿ, ಗೆಲುವಾಗಲಿ ಸೋಲಾಗಲಿ, ಚುನಾವಣೆಯ ಫಲಿತಾಂಶ ಏನೇ ಇರಲಿ, ಆಯಾ ಕ್ಷೇತ್ರದಲ್ಲಿ ಸಮಾಜಸೇವೆ ಮುಂದುವರಿಸುವ ಬದ್ಧತೆ ನಾಯಕರಿಗಿದ್ದರೆ ಕ್ಷೇತ್ರದ ಬದಲಾವಣೆ ಅಥವಾ ಮೀಸಲಾತಿಯ ಬಗ್ಗೆ ಇಷ್ಟೊಂದು ಆತಂಕಪಡುವ ಅಗತ್ಯವಿರುವುದಿಲ್ಲ.

ಒಂದು ಕಾಲದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ವ್ಯವಸ್ಥೆ, ಅಂಗನವಾಡಿ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಆಡಳಿತ ಘಟಕಗಳು ತಾಲೂಕು ಪಂಚಾಯತ್ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದವು. ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಕೇಂದ್ರಗಳಾಗಿದ್ದ ತಾಲೂಕು ಪಂಚಾಯತ್ಗಳ ಅಧಿಕಾರಗಳು ಕಾಲಕ್ರಮೇಣ ಕಡಿಮೆಯಾಗುತ್ತಾ ಬಂದಿವೆ. ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ವ್ಯವಸ್ಥೆಗಳನ್ನು ಉಳಿಸಿಕೊಂಡು, ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ನಿಧಾನವಾಗಿ ದುರ್ಬಲಗೊಳಿಸಲಾಗುತ್ತಿದೆಯೇ ಎಂಬ ಆತಂಕವೂ ಇದೆ. ಸ್ಥಳೀಯ ಆಡಳಿತ ವ್ಯವಸ್ಥೆಯ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಬಲಪಡಿಸುವ ಬದಲು ಅವುಗಳನ್ನು ನಾಮಮಾತ್ರದ ಸಂಸ್ಥೆಗಳನ್ನಾಗಿ ಮಾಡುವ ಪ್ರವೃತ್ತಿ ಪ್ರಜಾಪ್ರಭುತ್ವದ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವಾದುದು.
ಆಡಳಿತಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಜನಪ್ರತಿನಿಧಿಗಳಿಲ್ಲದ ವ್ಯವಸ್ಥೆಯಲ್ಲಿ ಜವಾಬ್ದಾರಿತನದ ಅಂತರ (Accountability Gap) ಉಂಟಾಗುತ್ತದೆ. ಅಧಿಕಾರಿಗಳು ಆಡಳಿತ ನಡೆಸುತ್ತಿದ್ದರೂ, ಜನರ ಸಮಸ್ಯೆಗಳಿಗೆ ನೇರವಾಗಿ ಉತ್ತರಿಸಬೇಕಾದ ಚುನಾಯಿತ ಪ್ರತಿನಿಧಿಗಳ ಕೊರತೆ ಇರುತ್ತದೆ.
ಪ್ರಜಾಪ್ರಭುತ್ವವೆಂದರೆ ಕೇವಲ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಲ್ಲ. ಜನರ ಮನೆಬಾಗಿಲಿನ ಸಮಸ್ಯೆಗಳಿಗೆ ಉತ್ತರ ನೀಡುವ ಸ್ಥಳೀಯ ಜನಪ್ರತಿನಿಧಿಗಳೂ ಅದರ ಜೀವಾಳ. ಚುನಾವಣೆಗಳನ್ನು ಅನಿರ್ದಿಷ್ಟವಾಗಿ ಮುಂದೂಡುವ ಸಂಸ್ಕೃತಿ ಮುಂದುವರಿದರೆ, ಅದು ಜನರ ಆಡಳಿತವನ್ನು ನಿಧಾನವಾಗಿ ಅಧಿಕಾರಿಗಳ ಮತ್ತು ಕಚೇರಿಗಳ ಆಡಳಿತವಾಗಿ ಪರಿವರ್ತಿಸುವ ಅಪಾಯವಿದೆ.
ಈ ವಿಚಾರದಲ್ಲಿ ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಅಥವಾ ಇತರ ಜಾತ್ಯತೀತ ಪಕ್ಷಗಳಾಗಲಿ ನಿರೀಕ್ಷಿತ ಮಟ್ಟದಲ್ಲಿ ಧ್ವನಿ ಎತ್ತದಿರುವುದು ಆತಂಕಕಾರಿ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರದಲ್ಲೂ ತಮ್ಮ ಬದ್ಧತೆಯನ್ನು ತೋರಿಸಬೇಕಲ್ಲವೇ? ಬಿಜೆಪಿಯ ಕಾಲದ ನಿರ್ಲಕ್ಷ್ಯವನ್ನು ಟೀಕಿಸುವ ಕಾಂಗ್ರೆಸ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದರೆ, ವಿರೋಧ ಪಕ್ಷಗಳೂ ಈ ವಿಚಾರದಲ್ಲಿ ಮೌನವಾಗಿದ್ದರೆ, ಜನರ ಹಿತಾಸಕ್ತಿಯನ್ನು ಪ್ರತಿನಿಧಿಸುವವರು ಯಾರು ಎಂಬ ಪ್ರಶ್ನೆ ಉಳಿಯುತ್ತದೆ.

ಇನ್ನು ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗಲಭೆ ಮತ್ತು ವಿವಾದಾತ್ಮಕ ಬೆಳವಣಿಗೆಗಳು ಒಂದಷ್ಟು ಮಟ್ಟಿಗೆ ಸುಧಾರಣೆಗೊಂಡಿದ್ದರೂ, ಅಭಿವೃದ್ಧಿ ಕಾರ್ಯಗಳಿಗೆ ನಿರೀಕ್ಷಿತ ವೇಗ ದೊರೆತಿಲ್ಲ. ಹಿಂದಿನ ಸರಕಾರದ ಅವಧಿಯಿಂದಲೂ ಮುಂದುವರಿದಿರುವ ಸ್ಥಳೀಯ ಆಡಳಿತದ ಈ ನಿರ್ಲಕ್ಷ್ಯಕ್ಕೆ ಇಂದಿನ ಸರಕಾರವೂ ಪರಿಹಾರ ಕಂಡುಕೊಳ್ಳದಿರುವುದು ವಿಪರ್ಯಾಸ.
ಮುಖ್ಯಮಂತ್ರಿ ಡಿ.ಕೆ. ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ. ಅವರಿಬ್ಬರನ್ನೂ ‘ಡೈನಾಮಿಕ್ ಹೀರೋ’ಗಳೆಂದು ಬಿಂಬಿಸಲಾಗುತ್ತಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಅವರ ನಾಯಕತ್ವದಿಂದ ನಿರೀಕ್ಷಿತ ಮಟ್ಟದ ಚುರುಕುತನ ಮತ್ತು ಕ್ರಿಯಾಶೀಲತೆ ಕಂಡುಬರುತ್ತಿಲ್ಲ.
ಇದರ ಪರಿಣಾಮ ಪಕ್ಷಕ್ಕಾಗಿ ಹಿಂದೆ ತೋರಿಸುತ್ತಿದ್ದ ಉತ್ಸಾಹ ಮತ್ತು ಸೇವಾ ಮನೋಭಾವ ಕಾರ್ಯಕರ್ತರಲ್ಲಿ ಕಡಿಮೆಯಾಗುತ್ತಿರುವಂತೆ ಕಾಣುತ್ತಿದೆ. ಸ್ಥಳೀಯ ಪಂಚಾಯತ್ಗಳಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ, ಅಧಿಕಾರ ಮತ್ತು ಜವಾಬ್ದಾರಿಗಳೂ ಸಮರ್ಪಕವಾಗಿ ಹಂಚಿಕೆಯಾಗದಿದ್ದರೆ, ಜನರ ನಡುವೆ ಕೆಲಸ ಮಾಡಲು ಕಾರ್ಯಕರ್ತರಿಗೆ ಅವಕಾಶವೆಲ್ಲಿಂದ ಬರಬೇಕು? ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ದುಡಿಯುವವರನ್ನು ಅಧಿಕಾರ ಮತ್ತು ಜವಾಬ್ದಾರಿಗಳ ಹಂಚಿಕೆಯ ಸಂದರ್ಭದಲ್ಲಿ ಕಡೆಗಣಿಸಿದರೆ, ಅವರಿಂದ ಸದಾ ಅದೇ ಉತ್ಸಾಹವನ್ನು ನಿರೀಕ್ಷಿಸುವುದು ಹೇಗೆ?
ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಲೆಕ್ಕಾಚಾರಕ್ಕಿಂತ ಜನರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ, ಅಗತ್ಯ ಅಧಿಕಾರ ಮತ್ತು ಅನುದಾನ ಒದಗಿಸಬೇಕು. ಏಕೆಂದರೆ, ಸ್ಥಳೀಯ ಚುನಾವಣೆಗಳನ್ನು ಸಮಯಕ್ಕೆ ನಡೆಸುವುದು ಕೇವಲ ಆಡಳಿತಾತ್ಮಕ ಕರ್ತವ್ಯವಲ್ಲ. ಅದು ಜನರ ಪ್ರಜಾಸತ್ತಾತ್ಮಕ ಹಕ್ಕಿನ ಗೌರವವೂ ಹೌದು. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಅಧಿಕಾರದ ಕೇಂದ್ರಗಳಲ್ಲಿ ಮಾತ್ರವಲ್ಲ, ಜನರ ಮನೆಬಾಗಿಲಿನ ಆಡಳಿತದಲ್ಲಿಯೂ ಇದೆ ಎಂಬುದನ್ನು ಸರಕಾರಗಳು ಅರಿತುಕೊಳ್ಳಬೇಕು.
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು

