ಮಂಜೇಶ್ವರ : ಮಜೀರ್ಪಳ್ಳ ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರ ನೇಮಕಾತಿಯು ನಿಯಮಬಾಹಿರ ಹಾಗೂ ಸ್ವಜನ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿ ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಸರ್ಕಾರದ ಹೊಸ ಆದೇಶದಂತೆ ನೂತನ ವಾರ್ಡ್ಗಳಿಗೆ ಮಾತ್ರ ಆರೋಗ್ಯ ಅಧಿಕಾರಿ ಹಾಗೂ ಪಂಚಾಯತ್ ಪ್ಯಾನಲ್ ನೇಮಕಾತಿ ನಡೆಸಬೇಕು. ಆದರೆ, ಇಲ್ಲಿ ಆಡಳಿತ ಸಮಿತಿಯು ನಿಯಮಗಳನ್ನು ಉಲ್ಲಂಘಿಸಿ, ವಾರ್ಡ್ 9ರ ನಿವಾಸಿಯಲ್ಲದವರನ್ನು ರಾಜಕೀಯ ಪ್ರಭಾವದಿಂದ ನೇಮಿಸಲು ಮುಂದಾಗಿದೆ ಎಂದು ಬಿಜೆಪಿ ಆಕ್ಷೇಪಿಸಿದೆ.
ಈ ವಾರ್ಡ್ನಲ್ಲಿ ಈಗಾಗಲೇ ಒಬ್ಬ ಆಶಾ ಕಾರ್ಯಕರ್ತೆ ಸೇವೆ ಸಲ್ಲಿಸುತ್ತಿದ್ದರೂ ಮತ್ತೊಬ್ಬರ ನೇಮಕಾತಿಗೆ ಸಂದರ್ಶನ ನಡೆಸಿರುವುದು ಸರ್ಕಾರದ ನಿರ್ದೇಶನಕ್ಕೆ ವಿರುದ್ಧವಾಗಿದೆ.

ಈ ಅನಧಿಕೃತ ನೇಮಕಾತಿಗೆ ಸ್ಥಳೀಯ ಕಮ್ಯುನಿಸ್ಟ್ ಬೆಂಬಲವಿರುವುದನ್ನು ಬಿಜೆಪಿ ಹಾಸ್ಯಸ್ಪದ ಎಂದು ಲೆಕ್ಕಿಸಿದ್ದು, ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಆರೋಗ್ಯ ಅಧಿಕಾರಿ ಮತ್ತು ಪಂಚಾಯತ್ ಕಾರ್ಯದರ್ಶಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

