ಚಿಕ್ಕವರಿದ್ದಾಗ ಬಣ್ಣ ಬಣ್ಣದ ಪೆನ್ಸಿಲ್‌ಗಳಿಗಾಗಿ ಹಾತೊರೆದ ದಿನಗಳೆಷ್ಟೋ…!
ಅಂದು ಕೇಳಿದ ತಕ್ಷಣ ತೆಗೆದುಕೊಡುವವರು ತುಂಬಾ ಕಡಿಮೆ. ಕೇಳಿ ಪಡೆದುಕೊಳ್ಳುವುದಕ್ಕಿಂತ ಬಡತನವೇ ಬೆನ್ನಟ್ಟುತ್ತಿದ್ದ ದಿನಗಳವು.


ಅಂಗಡಿಗೆ ಹೋಗಬೇಕೆಂದರೆ ಅಜ್ಜಿಯ ಕೈಯಿಂದ ಒಂದೆರಡು ರೂಪಾಯಿಗಳನ್ನು ಲಪಟಾಯಿಸಿ,
ಅವುಗಳನ್ನು ನಿಧಾನವಾಗಿ ಕೂಡಿಡುತ್ತಿದ್ದೆವು. ಡಬ್ಬಿ ತುಂಬಿದಾಗ ಆ ನಾಣ್ಯಗಳನ್ನೆಲ್ಲ ಎಣಿಸಿ,
ಶಾಲೆಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳುವಾಗ ಸಿಗುತ್ತಿದ್ದ ಸಂಭ್ರಮವೇ ಬೇರೆ!

ಆದರೆ ಇಂದು…
ನಮ್ಮ ಕಾಲ ಮೇಲೆ ನಾವು ನಿಂತಿದ್ದೇವೆ. ಕೈಯಲ್ಲಿ ಒಂದಿಷ್ಟು ಹಣವೂ ಇದೆ.
ಮನಸ್ಸಿಗೆ ಬೇಕಾದಷ್ಟು ಪುಸ್ತಕ, ಪೆನ್ನು, ಬಣ್ಣದ ಪೆನ್ಸಿಲ್‌ಗಳನ್ನು ಕೊಂಡುಕೊಳ್ಳುವ ಸಾಮರ್ಥ್ಯವೂ ಇದೆ.
ಆದರೆ ಅಂದು ಇದ್ದ ಆ ಸಂಭ್ರಮವನ್ನು ಆಸ್ವಾದಿಸಲು ಇಂದು ಸಮಯವೇ ಇಲ್ಲ!
ಸಮಯದ ಅಭಾವದಲ್ಲಿ ಎಲ್ಲವೂ ಸಾಧ್ಯವಿದ್ದರೂ, ಮನಸ್ಸಿಗೆ ಇಷ್ಟವಾದ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಂಡು ಸಂಭ್ರಮಿಸುವ ಸಮಯವೇ ಕಡಿಮೆಯಾಗಿದೆ.

ಜವಾಬ್ದಾರಿಗಳು ಹೆಚ್ಚಾದ ಕಾರಣ, ಬದುಕಿನ ಹಾದಿಯಲ್ಲಿ ಸಾಗುವಾಗ ಒಂದಿಷ್ಟು ನೋವುಗಳಿದ್ದರೂ ಮನಸ್ಸಿಗೊಂದು ನೆಮ್ಮದಿ ಅಂತೂ ಇದೆ.

ಯಾಕೆಂದರೆ, ಯಾರ ಋಣದಲ್ಲೂ ಬದುಕುವುದಕ್ಕಿಂತ ದೇವರು ಕೊಟ್ಟ ಬದುಕಿನಲ್ಲಿ ಸ್ವಂತ ಪರಿಶ್ರಮದಿಂದ ಬದುಕುತ್ತಿದ್ದೇವೆ ಎಂಬ ತೃಪ್ತಿಯೇ ದೊಡ್ಡದು.
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ…
ಇವೆಲ್ಲವೂ ಮನುಷ್ಯನೊಳಗೆ ಹುದುಗಿರುವ ಸಹಜ ಗುಣಗಳು. ಆದರೆ ಇವುಗಳನ್ನೆಲ್ಲ ಮೀರಿ ಬದುಕನ್ನು ನೋಡುವ ದೃಷ್ಟಿಕೋನ ನಮ್ಮದಾಗಬೇಕು.
ಬದುಕು ಕೆಲವೊಮ್ಮೆ ಶೂನ್ಯವೆನಿಸಿದರೂ, ನಾವು ಮಾಡುವ ಕೆಲಸ, ಮುಂದಿನ ದಿನಗಳಿಗಾಗಿ ನಡೆಸುವ ತಯಾರಿ, ನಮ್ಮ ನಡೆನುಡಿ, ನಮ್ಮ ಯಶಸ್ಸು, ನಮ್ಮ ಸಾಧನೆ ಎಂಬ ಛಲವೇ ಬದುಕಿಗೆ ಹೊಸ ಅರ್ಥ ನೀಡುತ್ತದೆ.

ಅದರ ಜೊತೆಗೆ ನಾವು ನಂಬಿದ ದೇವರ ಆಶೀರ್ವಾದ, ತಂದೆ-ತಾಯಿಯ ಹಾರೈಕೆ ನಮ್ಮೊಂದಿಗಿದ್ದರೆ, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವ ಧೈರ್ಯ ಖಂಡಿತ ಸಿಗುತ್ತದೆ.

ಅನುಭವಿಸಿದ ನೋವುಗಳೇನೂ ಕಡಿಮೆಯಿಲ್ಲ…
ಆದರೆ ಎಲ್ಲವನ್ನೂ ಸಹಿಸಿಕೊಳ್ಳುವ ತಾಳ್ಮೆಯನ್ನು ಭಗವಂತ ಕೊಟ್ಟ.
ಉತ್ತರ ಸಿಗದಿದ್ದ ಕೆಲವು ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಿತು. ಕುಗ್ಗಿದ ಮನಸ್ಸಿಗೆ ಮತ್ತೆ ಚೇತರಿಸಿಕೊಳ್ಳುವ ಶಕ್ತಿ ನೀಡಿತು. ಬದುಕನ್ನು ನಾವೇ ರೂಪಿಸಿಕೊಳ್ಳುವ ಧೈರ್ಯವನ್ನೂ ಕೊಟ್ಟಿತು.


ಕೊನೆಗೆ ಅರಿವಾದ ಸತ್ಯವೊಂದೇ…
ಬದುಕಿನಲ್ಲಿ ಎಲ್ಲವೂ ನಮ್ಮ ಇಚ್ಛೆಯಂತೆ ನಡೆಯದಿದ್ದರೂ, ಸಿಕ್ಕಿದ್ದರಲ್ಲಿ ಸಂತೃಪ್ತಿ ಕಂಡುಕೊಂಡು, ನಮ್ಮ ಪರಿಶ್ರಮದ ಮೇಲೆ ನಂಬಿಕೆಯಿಟ್ಟು, ದೇವರ ಆಶೀರ್ವಾದದೊಂದಿಗೆ ಮುನ್ನಡೆಯುವುದೇ ನಿಜವಾದ ಜೀವನ.

-ಬರವಣಿಗೆ
ರಶ್ಮಿತಾ ಆಚಾರ್ಯ ಹೊಸಂಗಡಿ

