ಮಂಜೇಶ್ವರದಲ್ಲಿ ಮುಂದುವರಿದ ಕಳ್ಳರ ಹಾವಳಿ: ದರ್ಗಾ ಶರೀಫ್ ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿ ದೋಚಿದ ದುಷ್ಕರ್ಮಿಗಳು

​ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಕಳ್ಳರು ಧಾರ್ಮಿಕ ಕೇಂದ್ರವೊಂದಕ್ಕೆ ಕನ್ನ ಹಾಕಿದ್ದಾರೆ. ವಾಮಂಜೂರು ಅಬಕಾರಿ ತಪಾಸಣಾ ಕೇಂದ್ರದ ಹಿಂಭಾಗದಲ್ಲಿರುವ ಕಡವತ್ ದರ್ಗಾ ಶರೀಫ್ ಮಸೀದಿಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಎಂದಿನಂತೆ ಮಸೀದಿಗೆ ಬೀಗ ಹಾಕಿ ತೆರಳಲಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ ಬಂದು ನೋಡಿದಾಗ ಮಸೀದಿಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ.

ಅನುಮಾನಗೊಂಡು ಒಳಗೆ ಹೋಗಿ ಪರಿಶೀಲಿಸಿದಾಗ ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಕಾಣಿಕೆ ಡಬ್ಬಿಯಲ್ಲಿ ಸುಮಾರು 15 ಸಾವಿರದಿಂದ 20 ಸಾವಿರ ರೂಪಾಯಿವರೆಗೆ ಹಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.

​ಕಳವು ಪ್ರಕರಣದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಎಎಸ್ಪಿ ಅಚ್ಚುತ ಅಶೋಕ್ ಹಾಗೂ ಮಂಜೇಶ್ವರ ಠಾಣಾಧಿಕಾರಿ ನೇತೃತ್ವದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!