ಮಂಗಳೂರು: ಸಂಗೀತ ಪರಿಷತ್ ಮಂಗಳೂರು ವತಿಯಿಂದ ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣ ಮಠ ಮಂಗಳೂರು ಸಹಯೋಗದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳ ಸಂಗೀತ ಹಬ್ಬ ‘ಮಂಗಳೂರು ಸಂಗೀತೋತ್ಸವ-2026’ ನ.27ರಿಂದ 29ರವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಂಗೀತ ಪರಿಷತ್ ಮಂಗಳೂರು ಅಧ್ಯಕ್ಷ ಎಚ್. ಸುಬ್ರಹ್ಮಣ್ಯ ರಾವ್ ಮಾಹಿತಿ ನೀಡಿ, ನ.27ರಂದು ಸಂಜೆ 5 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿತಿಯಲ್ಲಿ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎ. ಭರತ್ ಕುಮಾರ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಚ್. ಸುಬ್ರಹ್ಮಣ್ಯ ರಾವ್ ವಹಿಸಲಿದ್ದಾರೆ. ಸಂಜೆ 5.30ರಿಂದ ಪುತ್ತೂರಿನ ಅನೀಶ್ ವಿ. ಭಟ್ ಅವರ ಗಾಯನ ಕಚೇರಿ ನಡೆಯಲಿದೆ ಎಂದರು.

ನ.28ರಂದು ಸಂಜೆ 5 ಗಂಟೆಗೆ ಹೈದರಾಬಾದ್‌ನ ಜೆ.ಎಸ್. ಶ್ರೀರಾಮ್ ಅವರ ಗಾಯನ ಕಚೇರಿ ನಡೆಯಲಿದೆ. ನ.29ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಖ್ಯಾತ ಸಂಗೀತ ಕಲಾವಿದೆ ಡಾ. ಎಂ.ಎಸ್. ಶೀಲಾ ಅವರ ಗಾಯನ ಕಚೇರಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ‘ಮುರಳಿ ಮಾಧುರಿ’ ವಿಶೇಷ ಗೋಷ್ಠಿ ಗಾಯನ ಕಾರ್ಯಕ್ರಮವನ್ನು ಬಳ್ಳಂಪದವಿನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.
ಸಂಜೆ 5.15ಕ್ಕೆ ಚೆನ್ನೈನ ಪ್ರಸಿದ್ಧ ಕೊಳಲು ವಾದಕ ಜೆ.ಬಿ. ಶ್ರುತಿಸಾಗರ್ ಅವರ ವೇಣುವಾದನ ಕಚೇರಿಯೊಂದಿಗೆ ಸಂಗೀತೋತ್ಸವ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ನ.29ರಂದು ಸಂಜೆ 4 ಗಂಟೆಗೆ ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಗೀತ ಪರಿಷತ್ ಮಂಗಳೂರು ಗೌರವಾಧ್ಯಕ್ಷ ಡಾ. ಸಿ.ಆರ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ರಘುರಾಮ್ ಎಚ್.ಎಸ್., ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಹಾಪ್ರಬಂಧಕ ಹಾಗೂ ವಲಯ ಮುಖ್ಯಸ್ಥ ಸತ್ಯಂ ಪಲುಗುಲ, ಕೆನರಾ ಬ್ಯಾಂಕ್ ಮಹಾಪ್ರಬಂಧಕ ಮಂಜುನಾಥ್ ಬಿ. ಸಿಂಗೆ, ಮೂಡುಬಿದಿರೆಯ ಧನಲಕ್ಷ್ಮೀ ಕ್ಯಾಶ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀಪತಿ ಭಟ್, ಲೆಕ್ಕಪರಿಶೋಧಕ ಸಿ.ಎ. ಕೃಷ್ಣಮೂರ್ತಿ ಹಾಗೂ ಎಲ್‌ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಜಿ.ಎನ್. ಭಟ್ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಹಾಗೂ ಸಂಗೀತ ಗುರು ವಿದುಷಿ ಹೇಮಾ ಸುಬ್ಬರಾವ್ ಕಾಂಚನ ಅವರಿಗೆ ‘ಸಂಗೀತೋತ್ಸವ-2026’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಗೀತ ಕ್ಷೇತ್ರದ ಸಾಧನೆಗಾಗಿ ಪುತ್ತೂರಿನ ವಿದ್ವಾನ್ ಬಾಲಕೃಷ್ಣ ಹೊಸಮನೆ ಹಾಗೂ ಶೃಂಗೇರಿಯ ಪನ್ನಗ ಶರ್ಮ ಅವರಿಗೆ ‘ಸಂಗೀತ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಂಗೀತೋತ್ಸವದ ಅಂಗವಾಗಿ ಆಯೋಜಿಸಲಾದ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳ ಸಂಗೀತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಸಂಗೀತಾಸಕ್ತರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗೀತ ಪರಿಷತ್ ಮಂಗಳೂರು ಉಪಾಧ್ಯಕ್ಷ ಎಂ.ವಿ. ಪ್ರದೀಪ್, ಕಾರ್ಯದರ್ಶಿ ಸುಬ್ರಹ್ಮಣ್ಯ ಉಡುಪ, ಖಜಾಂಚಿ ವ್ಯಾಸಪ್ರಸಾದ್ ಹಾಗೂ ಸದಸ್ಯರಾದ ವಿದ್ವಾನ್ ಗೋಪಾಲ್ ಮತ್ತು ವಿಶಾಲಾಕ್ಷಿ ಉಪಸ್ಥಿತರಿದ್ದರು.

