81 ದಿನಗಳ ಹೋರಾಟಕ್ಕೆ ಜಯ: ನಾಲ್ವರು ಮಹಿಳಾ ಕಾರ್ಮಿಕರ ಮರುನೇಮಕಕ್ಕೆ HPCL ಒಪ್ಪಿಗೆ

ಸುರತ್ಕಲ್:ಸುರತ್ಕಲ್‌ನ HPCL ಘಟಕದಲ್ಲಿ ಉದ್ಯೋಗ ಕಳೆದುಕೊಂಡಿದ್ದ ನಾಲ್ವರು ಮಹಿಳಾ ಗುತ್ತಿಗೆ ಕಾರ್ಮಿಕರ 81 ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಶರಣವ್ವ ಭಜಂತ್ರಿ, ಪಾರವ್ವ ಗಾಣಿಗೇರ, ಸೂರವ್ವ ಕೊಲ್ಲದ್ ಹಾಗೂ ಸುವರ್ಣ ಪಾಟೀಲ ಅವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಲು HPCL ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಮಂಗಳೂರು ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 2ರ ಮುಂದಿನ ಮಾತುಕತೆಗೂ ಮುನ್ನ ನಾಲ್ವರು ಮಹಿಳೆಯರ ಮರುನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕಾರ್ಮಿಕ ಉಪ ಆಯುಕ್ತರು ಉದ್ಯೋಗ ಮರಳಿ ದೊರೆಯುವ ಖಾತರಿ ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಕಾರ್ಮಿಕರಿಗೆ ಧರಣಿ ಹಿಂಪಡೆದು ಕೆಲಸಕ್ಕೆ ಮರಳುವಂತೆ ಸೂಚಿಸಿದ್ದಾರೆ.

ಇದರೊಂದಿಗೆ ಸುರತ್ಕಲ್ ಬಾಳದಲ್ಲಿರುವ HPCL ಗೇಟ್ ಮುಂಭಾಗ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಮಹಿಳಾ ಕಾರ್ಮಿಕರು ಸಿಹಿ ಹಂಚುವ ಮೂಲಕ ಅಂತ್ಯಗೊಳಿಸಿದ್ದಾರೆ.

CITU, ನಾಗರಿಕ ಹೋರಾಟ ಸಮಿತಿ, ಸುರತ್ಕಲ್, ಜನವಾದಿ ಮಹಿಳಾ ಸಂಘಟನೆ ಹಾಗೂ DYFI ಸೇರಿದಂತೆ ಹಲವು ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದ್ದವು.

81 ದಿನಗಳ ನಿರಂತರ ಹೋರಾಟದ ಬಳಿಕ ಉದ್ಯೋಗ ಮರುನೇಮಕದ ಭರವಸೆ ದೊರೆತಿರುವುದು ನಾಲ್ವರು ಮಹಿಳಾ ಕಾರ್ಮಿಕರ ಕುಟುಂಬಗಳಲ್ಲಿ ಹೊಸ ಆಶಾವಾದ ಮೂಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!