ಮಂಗಳೂರು ಏರ್‌ಪೋರ್ಟ್ ಟ್ಯಾಕ್ಸಿ ಮುಷ್ಕರ ತೀವ್ರ: ನ.24ರಂದು ಸಂಪೂರ್ಣ ಬಂದ್

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ವಾಹನಗಳಿಗೆ ವಿಧಿಸಲಾಗುತ್ತಿರುವ ದುಬಾರಿ ಮತ್ತು ಅವೈಜ್ಞಾನಿಕ ಶುಲ್ಕ ಹಾಗೂ ಚಾಲಕರ ಮೇಲಿನ ಶೋಷಣೆಯನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ತೀವ್ರಗೊಳಿಸಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಕ್ಸಿ ಚಾಲಕ-ಮಾಲಕ ಸಂಘಟನೆಗಳು ನಿರ್ಧರಿಸಿವೆ.

ಈ ಬಗ್ಗೆ ಬಜ್ಪೆ ಬಳಿಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ದ್ವಾರದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ,

ನವೆಂಬರ್ 24ರಂದು (ಮಂಗಳವಾರ) ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಟ್ಯಾಕ್ಸಿ ಉದ್ಯಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು. ನವೆಂಬರ್ 25ರಿಂದ (ಬುಧವಾರ) ಬೇಡಿಕೆಗಳು ಈಡೇರುವವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ಟ್ಯಾಕ್ಸಿ ಅಥವಾ ಮ್ಯಾಕ್ಸಿಕ್ಯಾಬ್ ವಾಹನಗಳನ್ನು ಬಾಡಿಗೆಗೆ ಕಳುಹಿಸದಿರಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಮುಂಚಿತವಾಗಿಯೇ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ವಾಹನಗಳಿಗೆ ವಿಧಿಸಲಾಗುತ್ತಿರುವ ದುಬಾರಿ ಪ್ರವೇಶ ಹಾಗೂ ನಿಲುಗಡೆ ಶುಲ್ಕದಿಂದ ಚಾಲಕ-ಮಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಎರಡು-ಮೂರು ತಿಂಗಳಿಂದ ಈ ಸಮಸ್ಯೆಯ ಪರಿಹಾರಕ್ಕಾಗಿ ನಿರಂತರವಾಗಿ ಮನವಿ ಸಲ್ಲಿಸಲಾಗಿದ್ದು, ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ವಿವಿಧ ಹಂತಗಳಲ್ಲಿ ಭರವಸೆಗಳು ದೊರೆತಿದ್ದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ನವೆಂಬರ್ 17ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ. ಇದೀಗ ಐದನೇ ದಿನಕ್ಕೆ ಕಾಲಿಟ್ಟಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಸಂಘಟಕರು ತಿಳಿಸಿದರು.

ಹೋರಾಟ ಆರಂಭಿಸುವ ಮೊದಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂಬ ಉದ್ದೇಶ ಹೊಂದಲಾಗಿತ್ತು. ಅದರಂತೆ ಆರಂಭದ ದಿನದಿಂದಲೇ ಆನ್‌ಲೈನ್ ಟ್ಯಾಕ್ಸಿ ಚಾಲಕರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಕಳೆದ ಐದು ದಿನಗಳಿಂದ ಆನ್‌ಲೈನ್ ಟ್ಯಾಕ್ಸಿಗಳೂ ಕಾರ್ಯಾಚರಣೆ ನಡೆಸುತ್ತಿಲ್ಲ. ಇದೀಗ ಆಟೋರಿಕ್ಷಾ ಚಾಲಕ-ಮಾಲಕರ ಸಂಘಟನೆಗಳು, ಬಸ್ ಮಾಲಕರ ಸಂಘಟನೆಗಳು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಕೂಡ ಹೋರಾಟಕ್ಕೆ ಕೈಜೋಡಿಸಿವೆ.

ಈ ಹೋರಾಟ ಯಾವುದೇ ರಾಜಕೀಯ ಪಕ್ಷದ ವಿರುದ್ಧ ನಡೆಯುತ್ತಿರುವುದಲ್ಲ. ಇದು ಸಂಪೂರ್ಣವಾಗಿ ಸಮಸ್ಯೆ ಆಧಾರಿತ ಹಾಗೂ ಪಕ್ಷಾತೀತ ಹೋರಾಟವಾಗಿದೆ. ಅದಾನಿ ಸಂಸ್ಥೆಯ ಅಧೀನದಲ್ಲಿರುವ ವಿಮಾನ ನಿಲ್ದಾಣದಲ್ಲಿ ಕಾರ್ಮಿಕರು ಮತ್ತು ವಾಹನ ಚಾಲಕ-ಮಾಲಕರಿಗೆ ಆಗುತ್ತಿರುವ ಅನ್ಯಾಯ ಹಾಗೂ ಆರ್ಥಿಕ ಶೋಷಣೆಗೆ ಪರಿಹಾರ ಕಂಡುಕೊಳ್ಳುವುದು ಹೋರಾಟದ ಮುಖ್ಯ ಉದ್ದೇಶವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಾರ್ವಜನಿಕ ಸಂಘಟನೆಗಳು ಬೆಂಬಲ ನೀಡುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಜಿಲ್ಲಾಮಟ್ಟದ ಮುಖಂಡರು ಹಾಗೂ ಶಾಸಕರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಮ್ಯುನಿಸ್ಟ್ ಪಕ್ಷದ ವಿವಿಧ ಸಂಘಟನೆಗಳು, ಎಐಟಿಯುಸಿ ಸೇರಿದಂತೆ ಕಾರ್ಮಿಕ ಸಂಘಟನೆಗಳ ಪ್ರಮುಖರು ಪ್ರತಿದಿನ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಸಂಘಟಕರು ವಿವರಿಸಿದರು.

ಮಂಗಳವಾರ ಸಂಪೂರ್ಣ ಟ್ಯಾಕ್ಸಿ ಬಂದ್

ನವೆಂಬರ್ 24ರಂದು ಮಂಗಳವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಟ್ಯಾಕ್ಸಿ ಚಾಲಕ-ಮಾಲಕ ಸಂಘಟನೆಗಳು, ಆನ್‌ಲೈನ್ ಟ್ಯಾಕ್ಸಿ ಸೇವೆಗಳು, ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಟ್ಯಾಕ್ಸಿ ಉದ್ಯಮಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳು ಸಂಪೂರ್ಣವಾಗಿ ಸೇವೆ ಸ್ಥಗಿತಗೊಳಿಸಲಿವೆ. ಅಂದು ಯಾವುದೇ ಬಾಡಿಗೆ ಸಂಚಾರ ನಡೆಸದೆ ವಾಹನಗಳನ್ನು ನಿಲ್ಲಿಸಿ ಎಲ್ಲ ಚಾಲಕರು ವಿಮಾನ ನಿಲ್ದಾಣದ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮಂಗಳವಾರದ ಬಳಿಕವೂ ಬೇಡಿಕೆಗಳು ಈಡೇರದಿದ್ದರೆ ನವೆಂಬರ್ 25ರಿಂದ ವಿಮಾನ ನಿಲ್ದಾಣಕ್ಕೆ ಯಾವುದೇ ಟ್ಯಾಕ್ಸಿ ಸೇವೆ ಒದಗಿಸುವುದಿಲ್ಲ. ಈ ನಿರ್ಧಾರವನ್ನು ಉಭಯ ಜಿಲ್ಲೆಗಳ ಸಂಘಟನೆಗಳ ಪದಾಧಿಕಾರಿಗಳು ಒಮ್ಮತದಿಂದ ಕೈಗೊಂಡಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೆ ಎಷ್ಟು ದಿನಗಳಾದರೂ ಹೋರಾಟ ಮುಂದುವರಿಸಲಾಗುವುದು ಎಂದು ಸಂಘಟಕರು ಎಚ್ಚರಿಸಿದ್ದಾರೆ.

ಆಟೋರಿಕ್ಷಾ ಸಂಘಟನೆಗಳೂ ಸಾಥ್

ಟ್ಯಾಕ್ಸಿ ಚಾಲಕರ ಹೋರಾಟಕ್ಕೆ ಆಟೋರಿಕ್ಷಾ ಚಾಲಕ-ಮಾಲಕರ ಸಂಘಟನೆಗಳೂ ಬೆಂಬಲ ನೀಡಿವೆ. ಮಂಗಳವಾರದಂದು ಆಟೋರಿಕ್ಷಾಗಳೂ ವಿಮಾನ ನಿಲ್ದಾಣಕ್ಕೆ ಬಾಡಿಗೆ ಸಂಚಾರ ನಡೆಸುವುದಿಲ್ಲ. ವಿಮಾನ ನಿಲ್ದಾಣದಲ್ಲಿ ಆಟೋರಿಕ್ಷಾಗಳಿಗೂ ಪ್ರವೇಶ ಮತ್ತು ನಿಲುಗಡೆಗೆ ಸಂಬಂಧಿಸಿದಂತೆ ಶುಲ್ಕ ವಿಧಿಸಲಾಗುತ್ತಿದೆ. ಆರಂಭಿಕ ಐದು ನಿಮಿಷಗಳಿಗೆ ₹50 ಹಾಗೂ ಐದು ನಿಮಿಷ ಮೀರಿದರೆ ₹200 ಶುಲ್ಕ ವಿಧಿಸಲಾಗುತ್ತಿದೆ. ಈ ರೀತಿಯ ದುಬಾರಿ ಶುಲ್ಕದಿಂದ ಆಟೋ ಚಾಲಕರಿಗೂ ಆರ್ಥಿಕ ಹೊರೆ ಉಂಟಾಗುತ್ತಿದೆ. ಆದ್ದರಿಂದ ಅವರೂ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಪ್ರಯಾಣಿಕರಿಗೆ ತೊಂದರೆ ನೀಡುವ ಉದ್ದೇಶವಿಲ್ಲ

ವಿಮಾನ ನಿಲ್ದಾಣಕ್ಕೆ ಆಗಮಿಸುವ ದೇಶ-ವಿದೇಶಗಳ ಪ್ರಯಾಣಿಕರ ಬಗ್ಗೆ ಸಂಘಟನೆಗಳಿಗೆ ಗೌರವವಿದೆ. ಹೋರಾಟದ ಹೆಸರಿನಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ನೀಡುವ ಉದ್ದೇಶವಿಲ್ಲ. ಖಾಸಗಿ ವಾಹನಗಳಲ್ಲಿ ಬರುವ ಪ್ರಯಾಣಿಕರನ್ನು ತಡೆಯುವುದಿಲ್ಲ. ಆದರೆ, ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ಮತ್ತು ಅಲ್ಲಿಂದ ತಮ್ಮ ಊರುಗಳಿಗೆ ಪ್ರಯಾಣಿಸುವವರು ಮುಂಚಿತವಾಗಿಯೇ ಖಾಸಗಿ ವಾಹನ ಅಥವಾ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

ಇದೇ ವೇಳೆ, ಖಾಸಗಿ ನೋಂದಣಿ ಹೊಂದಿರುವ ವಾಹನಗಳನ್ನು ಟ್ಯಾಕ್ಸಿ ಸೇವೆಗೆ ಬಳಸುವ ಅಕ್ರಮ ಸಂಚಾರದ ವಿರುದ್ಧವೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರದಿಂದ ಅಗತ್ಯ ಪರವಾನಗಿ ಪಡೆಯದೆ ಖಾಸಗಿ ನೋಂದಣಿ ವಾಹನಗಳ ಮೂಲಕ ಬಾಡಿಗೆ ಸೇವೆ ನಡೆಸಲಾಗುತ್ತಿದೆ ಎಂಬ ಆರೋಪವಿದ್ದು, ಇಂತಹ ವಾಹನಗಳ ಪಟ್ಟಿಯನ್ನು ಈಗಾಗಲೇ ಪೊಲೀಸ್ ಠಾಣೆಗಳಿಗೆ ನೀಡಲಾಗಿದೆ. ಪ್ರಯಾಣಿಕರು ಟ್ಯಾಕ್ಸಿ ಬುಕ್ ಮಾಡುವಾಗ ವಾಹನದ ಪರವಾನಗಿ ಮತ್ತು ನೋಂದಣಿ ವಿವರಗಳನ್ನು ಪರಿಶೀಲಿಸಬೇಕು ಎಂದು ಸಂಘಟನೆಗಳು ಎಚ್ಚರಿಸಿವೆ.

ಧರಣಿ ಸ್ಥಳದಲ್ಲಿ ಪ್ರತಿದಿನ ಸುಮಾರು 150ರಿಂದ 200 ಮಂದಿ ಭಾಗವಹಿಸುತ್ತಿದ್ದಾರೆ. ಮಂಗಳವಾರ ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರತಿಭಟನೆಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಸೇರಿದಂತೆ 19 ಮಂದಿ ಸದಸ್ಯರೂ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯನ್ನು ಸಂಪೂರ್ಣ ಶಾಂತಿಯುತವಾಗಿ ನಡೆಸಲಾಗುವುದು. ಯಾವುದೇ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.

ಉತ್ತರ ಕನ್ನಡ, ಮಡಿಕೇರಿ ಹಾಗೂ ಕೇರಳ ರಾಜ್ಯದ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳೂ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದ ವಿವಿಧ ಟ್ಯಾಕ್ಸಿ ಸಂಘಟನೆಗಳಿಂದಲೂ ಹೋರಾಟಕ್ಕೆ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್, ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಷನ್ ಅಧ್ಯಕ್ಷ ಆನಂದ, ಆಟೋ ಚಾಲಕ-ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷರು, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ರಾಮನಾಥ್, ಆಟೋರಿಕ್ಷಾ ಸಂಘದ ಅಧ್ಯಕ್ಷ ಅನ್ಸರ್ ಬಜಾಲ್, ಕಾರ್ಯದರ್ಶಿ ಮೋಹನ್, ಸಂಘಟನೆಗಳ ಮಾರ್ಗದರ್ಶಕ ವಿಷ್ಣುಮೂರ್ತಿ ಭಟ್, ಉಭಯ ಜಿಲ್ಲೆಗಳ ಟ್ಯಾಕ್ಸಿ ಸಂಘಟನೆಗಳ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!