ಹುಮನಾಬಾದ್: ಜನಪರ, ರೈತಪರ ಹಾಗೂ ವಿಶೇಷವಾಗಿ ಬಡವರ ಪರವಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಸಾಹಿತಿ, ಪರಿಸರವಾದಿ ಸಂಗಮೇಶ ಎನ್. ಜವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮರೆಡ್ಡಿ ಸಿಂಧನಕೇರಾ ಅವರ ನಿಸ್ವಾರ್ಥ ಸೇವೆ ಅನನ್ಯ ಮತ್ತು ಅಪಾರವಾಗಿದೆ ಎಂದು ಸಾವಿತ್ರಿ ಫುಲೆ ಸಂಘದ ಅಧ್ಯಕ್ಷೆ ಶ್ರೀಮತಿ ಬಾಯಿ ರೆಡ್ಡಿ ಹೇಳಿದರು.

ತಾಲೂಕಿನ ಹಳ್ಳಿಖೇಡ್ (ಬಿ) ಗ್ರಾಮದಲ್ಲಿ ಗಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಂಗಮೇಶ ಎನ್. ಜವಾದಿ ಹಾಗೂ ಭೀಮರೆಡ್ಡಿ ಸಿಂಧನಕೇರಾ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ದುಡಿಯುವ ನಿಸ್ವಾರ್ಥ ಸೇವಾ ಮನೋಭಾವದ ಕೈಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಸುಖ–ಭೋಗಗಳನ್ನು ಬದಿಗಿಟ್ಟು ಸಮಾಜಮುಖಿಯಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಂಗಮೇಶ ಎನ್. ಜವಾದಿ ಹಾಗೂ ಭೀಮರೆಡ್ಡಿ ಸಿಂಧನಕೇರಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಇವರಂತಹ ಸಮಾಜಮುಖಿ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆಗೆ ಪ್ರೋತ್ಸಾಹ ನೀಡಬೇಕು. ಇವರ ನಿಸ್ವಾರ್ಥ ಸೇವೆ ಯುವಜನರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗಲಿ ಎಂದು ಅವರು ಆಶಿಸಿದರು.


ಸಂಗಮೇಶ ಎನ್. ಜವಾದಿ ಅವರು ಸಾಹಿತ್ಯ, ಪರಿಸರ ಸಂರಕ್ಷಣೆ, ರೈತರು ಹಾಗೂ ಬಡವರ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಭೀಮರೆಡ್ಡಿ ಸಿಂಧನಕೇರಾ ಅವರು ಸಾಮಾಜಿಕ ಕಾರ್ಯಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇಬ್ಬರ ಸೇವಾ ಮನೋಭಾವವೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಪ್ರೇರಣೆಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಭೀಮರೆಡ್ಡಿ ನಿಂಗರೆಡ್ಡಿ, ಶ್ರೀನಾಥ ರೆಡ್ಡಿ, ಸಿದ್ಧಾರಡ್ಡಿ, ರವೀಂದ್ರ ರೆಡ್ಡಿ, ವಿಜಯಕುಮಾರ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

