
ಮಂಗಳೂರು: ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಬೆಳ್ಳಿ ಮಹೋತ್ಸವದ ಅಂಗವಾಗಿ ಡಿ.3ರಂದು ಬೆಳಗ್ಗೆ 9.30ರಿಂದ ಕಾಲೇಜಿನ ಕ್ಯಾಂಪಸ್ನಲ್ಲಿ ಒಂದು ದಿನದ ಕೈಗಾರಿಕಾ ಸಮಾವೇಶ ನಡೆಯಲಿದೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ರಿಯೊ ಡಿಸೋಜಾ ಮಾತನಾಡಿ, ‘ಸಿನರ್ಜೈಸಿಂಗ್ ಇಂಡಸ್ಟ್ರಿ, ಅಕಾಡೆಮಿ ಮತ್ತು ಪ್ರಾದೇಶಿಕ ಸ್ಟಾರ್ಟ್ಅಪ್ಗಳು’ ಎಂಬ ವಿಷಯದಡಿ ಸಮಾವೇಶ ಆಯೋಜಿಸಲಾಗುತ್ತಿದೆ. ಕರಾವಳಿ ಕರ್ನಾಟಕದ ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಉದಯೋನ್ಮುಖ ಸ್ಟಾರ್ಟ್ಅಪ್ಗಳ ನಡುವಿನ ಸಹಯೋಗವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದರು.

ಜ್ಯೋತಿ ಲ್ಯಾಬ್ಸ್ನ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಮುಖ್ಯ ಅತಿಥಿಯಾಗಿ ಹಾಗೂ ಕ್ರಿಂಟರ್ಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನೀಲೇಶ್ ಚೌಗುಲೆ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಾದೇಶಿಕ ನಾವೀನ್ಯತೆ, ಪರಿಸರ ವ್ಯವಸ್ಥೆ, ನೂತನ ತಂತ್ರಜ್ಞಾನ ಮತ್ತು ಸೈಬರ್ ಅರಿವು ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಮುಖ ಭಾಷಣ ಹಾಗೂ ನಾಲ್ಕು ಸಮೂಹ ಚರ್ಚೆಗಳು ನಡೆಯಲಿವೆ.

ಸಮಾವೇಶದಲ್ಲಿ ಸ್ಟಾರ್ಟ್ಅಪ್ ಮತ್ತು ನಾವೀನ್ಯತೆ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಟಾರ್ಟ್ಅಪ್ಗಳು ತಮ್ಮ ಉತ್ಪನ್ನ, ತಂತ್ರಜ್ಞಾನ ಹಾಗೂ ಉದ್ಯಮ ಕಲ್ಪನೆಗಳನ್ನು ಪ್ರದರ್ಶಿಸಬಹುದು. ಅಲ್ಲದೆ, ‘ಎಲಿವೇಟರ್ ಪಿಚ್’ ಸ್ಪರ್ಧೆಯಲ್ಲಿ ಉದ್ಯಮ ನಾಯಕರು ಮತ್ತು ಹೂಡಿಕೆದಾರರ ಮುಂದೆ ತಮ್ಮ ಉದ್ಯಮ ಕಲ್ಪನೆಗಳನ್ನು ಪ್ರಸ್ತುತಪಡಿಸಲು ಅವಕಾಶವಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಸ್ಟಾರ್ಟ್ಅಪ್ಗಳಿಗೆ ಉಚಿತವಾಗಿ ಮಳಿಗೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ವಿಜಯ್ ವಿ.ಎಸ್., ನೋಯಲ್ ದೀಪಕ್ ಶಿರಿ, ಜಾನ್ ಡಿಸಿಲ್ವಾ, ಶ್ರೀರಂಗ ಭಟ್ ಹಾಗೂ ಅಜಿತ್ ಉಪಸ್ಥಿತರಿದ್ದರು.

