ನ.28, 29ರಂದು ಕಾಸರಗೋಡಿನಲ್ಲಿ 8ನೇ ಗಡಿನಾಡ ಕನ್ನಡ ನುಡಿ ಹಬ್ಬ

ಕಾಸರಗೋಡು: ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಂಡ ಅಚ್ಚಗನ್ನಡ ಪ್ರದೇಶ, ಪ್ರಾಕೃತಿಕ ಗಡಿನಾಡು ಎಂದೇ ಗುರುತಿಸಿಕೊಂಡಿರುವ ಕಾಸರಗೋಡಿನಲ್ಲಿ ನ.28 ಮತ್ತು 29ರಂದು ಎರಡು ದಿನಗಳ 8ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಹಾಗೂ ಗಡಿನಾಡ ಕನ್ನಡ ನುಡಿ ಹಬ್ಬ ನಡೆಯಲಿದೆ. ಸಮ್ಮೇಳನದ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಕಾಸರಗೋಡಿನ ಕನ್ನಡ ಗ್ರಾಮ ಸಜ್ಜಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಈ ಹಿಂದೆ ಏಳು ಕೇರಳ ರಾಜ್ಯ ಕನ್ನಡ ಸಮ್ಮೇಳನಗಳು ಹಾಗೂ ಕೇರಳ-ಕರ್ನಾಟಕ ಉತ್ಸವಗಳು ಕಾಸರಗೋಡಿನ ವಿವಿಧೆಡೆ ಯಶಸ್ವಿಯಾಗಿ ನಡೆದಿವೆ. 37 ವರ್ಷಗಳ ಇತಿಹಾಸ ಹೊಂದಿರುವ ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಕನ್ನಡದ ಅಸ್ತಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಕನ್ನಡ ಗ್ರಾಮದಲ್ಲಿ ಮಲಯಾಳೀಕರಣದ ನಡುವೆಯೂ ಕನ್ನಡದ ಧ್ವನಿಯನ್ನು ಎತ್ತಿಹಿಡಿದು ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ. ಈ ಬಾರಿ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವಕ್ಕೂ ಕನ್ನಡ ಗ್ರಾಮ ವೇದಿಕೆಯಾಗಲಿದೆ. ಇದೇ ಸಂದರ್ಭದಲ್ಲಿ ಕೇರಳ-ಕರ್ನಾಟಕ ಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸ ಮತ್ತು ಕಾಸರಗೋಡು ಗೋಕುಟೀರದ ಪ್ರವೇಶೋತ್ಸವವೂ ನಡೆಯಲಿದೆ.

ನ.28ರಂದು ಬೆಳಗ್ಗೆ 9 ಗಂಟೆಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಆವರಣದಿಂದ ಕನ್ನಡ ಗ್ರಾಮಕ್ಕೆ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಕರ್ನಾಟಕದ ಐದು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಬೆಳಗ್ಗೆ 9.45ಕ್ಕೆ 8ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಹಾಗೂ ಕೇರಳ-ಕರ್ನಾಟಕ ಉತ್ಸವವನ್ನು ಮಾಜಿ ಶಾಸಕ, ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ಉದ್ಘಾಟಿಸಲಿದ್ದಾರೆ. ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ಕುಲಪತಿ ಡಾ. ಶಿವಾನಂದ ಕೆಳಗಿನಮನೆ, ಶಾಸಕರಾದ ಕಲ್ಲಟ್ರ ಮಾಯಿನ್, ಎ.ಕೆ.ಎಂ. ಅಶ್ರಫ್, ನೀಲಕಂಠನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕೇರಳ-ಕರ್ನಾಟಕ ಭವನದ ಭೂಮಿಪೂಜೆ ಮತ್ತು ಶಿಲಾನ್ಯಾಸ ಹಾಗೂ ಕಾಸರಗೋಡು ಗೋಕುಟೀರದ ಪ್ರವೇಶೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಪಂಚಮಠಗಳ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು, ಮೂಡುಬಿದಿರೆ ಜೈನಮಠದ ಜಗದ್ಗುರು ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮನ್ಣ ಬೇವಿನಮಠ ಅವರು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕಲಾಪ್ರದರ್ಶನ, ಕೃಷಿ ವಸ್ತುಪ್ರದರ್ಶನ, ಕರಕುಶಲ ಖಾದಿ ಮಳಿಗೆ ಹಾಗೂ ವೈದ್ಯಕೀಯ ತಪಾಸಣಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ ಇಲ್ದಾಜೆ ಅವರು ‘ಕರಾವಳಿ ಸ್ಮರಣ’ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ತೆಂಕುತಿಟ್ಟು ಯಕ್ಷಗಾನದ ವೇಷಭೂಷಣ ಪ್ರದರ್ಶನವೂ ನಡೆಯಲಿದೆ.

ಮಧ್ಯಾಹ್ನ 12.30ರಿಂದ ಅಂತರರಾಜ್ಯ ಮಟ್ಟದ ಮಾಧ್ಯಮಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಸೇರಿದಂತೆ ಹಲವು ಪ್ರಸಿದ್ಧ ಪತ್ರಕರ್ತರು ಭಾಗವಹಿಸಲಿದ್ದಾರೆ. ಕರ್ನಾಟಕ ಹಾಗೂ ಹೊರನಾಡು ಪ್ರದೇಶಗಳ ಪತ್ರಿಕಾ ಸಂಪಾದಕರು, ವರದಿಗಾರರು ಮತ್ತು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನದ ಶತಕವಿಗೋಷ್ಠಿ ಆರಂಭವಾಗಲಿದೆ. ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಉದ್ಘಾಟಿಸಲಿದ್ದು, ಡಾ. ಅನುಸೂಯ ಕಾಂಬ್ಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಹಾಗೂ ಕಿರಿಯ ಕವಿಗಳು ಕವನ ವಾಚನ ಮಾಡಲಿದ್ದಾರೆ.

ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೃತ್ಯ ಸಂಭ್ರಮ, ಖ್ಯಾತ ಗಾಯಕ ರಮೇಶಚಂದ್ರ ಕೂಡ್ಲು ಅವರಿಂದ ಸುಗಮ ಸಂಗೀತ, ಭರತನಾಟ್ಯ, ಗೀತಗಾಯನ ಹಾಗೂ ಜನಪದ ಕಲಾ ಸಂಭ್ರಮ ಪ್ರೇಕ್ಷಕರನ್ನು ರಂಜಿಸಲಿದೆ.

ನ.29ರಂದು ಬೆಳಗ್ಗೆ 9 ಗಂಟೆಯಿಂದ ಸಾಮೂಹಿಕ ಭಜನಾ ಸಂಕೀರ್ತನೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಶಿವರಾಮ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ಜರುಗಲಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್ ಉದ್ಘಾಟಿಸಲಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಶತಕವಿಗೋಷ್ಠಿ ನಡೆಯಲಿದೆ. ಬಳಿಕ ಸಿ.ವೈ. ಮೆಣಸಿನಕಾಯಿ ಅವರ ಅಧ್ಯಕ್ಷತೆಯಲ್ಲಿ ಭಾಷಾ ಬಾಂಧವ್ಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಮಧ್ಯಾಹ್ನ 3 ಗಂಟೆಯಿಂದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಮೇಶಚಂದ್ರ ಕೂಡ್ಲು, ಬೆಂಗಳೂರು ಸೇರಿದಂತೆ ವಿವಿಧ ಕ್ಷೇತ್ರಗಳ 60ಕ್ಕೂ ಅಧಿಕ ಸಾಧಕರಿಗೆ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಂಜೆ 6.30ಕ್ಕೆ ಸಿ.ಎಂ. ತಿಮ್ಮಯ್ಯ ಅವರ ಸಾರಥ್ಯದ ಬೆಂಗಳೂರಿನ ವಿ.ಕೆ.ಎಂ. ಕಲಾವಿದರಿಂದ ‘ಸಾಕ್ಷಿಕಲ್ಲು’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.

ಎರಡು ದಿನಗಳ ಸಮ್ಮೇಳನದಲ್ಲಿ ಎರಡು ಸಾವಿರಕ್ಕೂ ಅಧಿಕ ಕನ್ನಡಿಗರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಆಗಮಿಸುವ ಎಲ್ಲರಿಗೂ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಮ್ಮೇಳನದ ಸಾರಥಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!