ಒಗ್ಗಟ್ಟಿನ ಒಲುಮೆಯಲ್ಲಿ ಒಂದಾದ ಕನ್ನಡಿಗರು: ದುಬೈ ಕರ್ನಾಟಕ ರಾಜ್ಯೋತ್ಸವ–2026 ಅದ್ಧೂರಿ ಸಂಭ್ರಮ

ರಾಮಚಂದ್ರ ಹೆಗ್ಡೆಗೆ ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ನಾ. ಸೋಮೇಶ್ವರ ಅವರಿಗೆ ಅಂತಾರಾಷ್ಟ್ರೀಯ ಕನ್ನಡ ರತ್ನ; ಡಾ. ರೊನಾಲ್ಡ್ ಕೊಲಾಸೊಗೆ ಗ್ಲೋಬಲ್ ಐಕಾನ್ ಆಫ್ ಯುನಿಟಿ ಗೌರವ

ದುಬೈ: ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಅನಾವರಣಗೊಳಿಸುವ ಮೂಲಕ ದುಬೈ ಕರ್ನಾಟಕ ರಾಜ್ಯೋತ್ಸವ–2026 ಅದ್ಧೂರಿಯಾಗಿ ಜರುಗಿತು. ಕರ್ನಾಟಕ ಸಂಘ ದುಬೈ ನೇತೃತ್ವದಲ್ಲಿ ಕನ್ನಡಿಗರ ಕೂಟ ದುಬೈ ಸಹಯೋಗದೊಂದಿಗೆ ದುಬೈನ ಅಲ್ ಖಿಸೈಸ್‌ನ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ಭಾನುವಾರ ನಡೆದ ಈ ಕಾರ್ಯಕ್ರಮವು ಅನಿವಾಸಿ ಕನ್ನಡಿಗರ ಒಗ್ಗಟ್ಟು ಮತ್ತು ಕನ್ನಡಾಭಿಮಾನದ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಕನ್ನಡದ ಕಹಳೆ ಮೊಳಗಿದ ಸಂಭ್ರಮ, ನಾಡಿನ ವಿವಿಧ ಕಲಾಪ್ರಕಾರಗಳ ಸೊಬಗು, ಮನಮೋಹಕ ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕನ್ನಡಿಗರ ಅಭೂತಪೂರ್ವ ಒಗ್ಗಟ್ಟು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಸಾವಿರಾರು ಮೈಲುಗಳ ದೂರದಲ್ಲಿದ್ದರೂ ತಾಯ್ನಾಡಿನ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಎದೆಯಾಳದಲ್ಲಿ ಜೀವಂತವಾಗಿರಿಸಿಕೊಂಡಿರುವ ಅನಿವಾಸಿ ಕನ್ನಡಿಗರು ದುಬೈ ನೆಲದಲ್ಲಿ ಕನ್ನಡದ ಅಸ್ಮಿತೆ ಮತ್ತು ಏಕತೆಯ ಶಕ್ತಿಯನ್ನು ಮತ್ತೊಮ್ಮೆ ಸಾರಿದರು.

1985ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಘ ದುಬೈ ಮತ್ತು 2002ರಲ್ಲಿ ಸ್ಥಾಪನೆಯಾದ ಕನ್ನಡಿಗರ ಕೂಟ ದುಬೈ ಈ ಬಾರಿ ಒಂದಾಗಿ ರಾಜ್ಯೋತ್ಸವವನ್ನು ಆಯೋಜಿಸಿದ್ದವು. ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ನಿರಂತರವಾಗಿ ನಡೆದ ಈ ಕನ್ನಡ ಹಬ್ಬದಲ್ಲಿ ಸಾವಿರಾರು ಕನ್ನಡಿಗರು ಭಾಗವಹಿಸಿ ಸಂಭ್ರಮಿಸಿದರು. ಗಲ್ಫ್ ರಾಷ್ಟ್ರಗಳಲ್ಲೇ ಅತಿದೊಡ್ಡ ಕನ್ನಡ ಹಬ್ಬವೆಂಬ ಹೆಗ್ಗಳಿಕೆ ಪಡೆದಿರುವ ಈ ಉತ್ಸವವು ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿತು.

ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಖ್ಯಾತ ಅನಿವಾಸಿ ಉದ್ಯಮಿ ಹಾಗೂ ಸಮಾಜಸೇವಕ ಡಾ. ರೊನಾಲ್ಡ್ ಕೊಲಾಸೊ, ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, ಉದ್ಯಮಿ ಡಾ. ಬಿ.ಆರ್. ಶೆಟ್ಟಿ, ಖ್ಯಾತ ಲೇಖಕ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳ ನಿರೂಪಕ ಡಾ. ನಾ. ಸೋಮೇಶ್ವರ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ., ಉದ್ಯಮಿ ಹರೀಶ್ ಶೇರಿಗಾರ್, ಸೈಯೋನ್ ಪ್ರಾಪರ್ಟೀಸ್‌ನ ಸಂಸ್ಥಾಪಕ ಪ್ರವೀಣ್ ಕುಮಾರ್ ಅಮರನಾಥ್, ದುಬೈ ಬಿಸಿಎಫ್ ಅಧ್ಯಕ್ಷ ಡಾ. ಬಿ.ಕೆ. ಯೂಸುಫ್, ಉದ್ಯಮಿ ರಾಮಚಂದ್ರ ಹೆಗ್ಡೆ, ರೊನಾಲ್ಡ್ ಮಾರ್ಟಿಸ್, ಜಯಂತ್ ಶೆಟ್ಟಿ ಹಾಗೂ ಮೋನಿಕಾ ಮಂದಣ್ಣ ಸೇರಿದಂತೆ ಹಲವು ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರೊನಾಲ್ಡ್ ಕೊಲಾಸೊ ಅವರು, ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಬಗ್ಗೆ ಕರ್ನಾಟಕ ಸರ್ಕಾರದ ಧೋರಣೆ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು. ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕನ್ನಡಿಗರನ್ನೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿವಾಸಿಗಳಂತೆಯೇ ಸಮಾನ ಗೌರವ ಮತ್ತು ಮನ್ನಣೆಯಿಂದ ಕಾಣಬೇಕು ಎಂದು ಒತ್ತಾಯಿಸಿದರು. ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿ ಇತರ ದೇಶಗಳಲ್ಲಿ ನಡೆಯುವ ಕನ್ನಡಪರ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ, ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಪರವಾಗಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಸಹಕಾರ ಅಥವಾ ಆರ್ಥಿಕ ನೆರವು ನೀಡದೆ ಕಡೆಗಣಿಸಲಾಗುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನಿವಾಸಿ ಕನ್ನಡಿಗರ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಹಲವು ಬಾರಿ ಒತ್ತಾಯಿಸಿದ್ದರೂ ಸರ್ಕಾರ ಈವರೆಗೆ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದ್ದು, ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ ಮಾತನಾಡಿ, ದುಬೈನಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬುದು ಅನಿವಾಸಿ ಕನ್ನಡಿಗರ ಬಹುದಿನಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆರ್ಥಿಕ ನೆರವು ಹಾಗೂ ಅಗತ್ಯ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಪೋಷಕ ರೊನಾಲ್ಡ್ ಮಾರ್ಟಿಸ್ ಮಾತನಾಡಿ, ಎರಡೂ ಸಂಘಟನೆಗಳು ಒಂದಾಗಿ ಆಯೋಜಿಸಿದ ರಾಜ್ಯೋತ್ಸವ ಯಶಸ್ವಿಯಾಗಿರುವುದು ಸಂತಸದ ಸಂಗತಿ ಎಂದರು.

ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ಮಾತನಾಡಿ, 2002ರಿಂದ ಸಂಸ್ಥೆ ನಡೆದುಬಂದ ಹಾದಿ, ಕನ್ನಡ ಭಾಷೆಯ ಸಂರಕ್ಷಣೆ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡಿಗರನ್ನು ಒಗ್ಗೂಡಿಸಲು ನಡೆಸಿಕೊಂಡು ಬರುತ್ತಿರುವ ಪ್ರಯತ್ನಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸಾಧನೆಗಳು ಮತ್ತು ಕಾರ್ಯಚಟುವಟಿಕೆಗಳನ್ನು ಒಳಗೊಂಡ ಅಧಿಕೃತ ಪ್ರೊಫೈಲ್ ಬಿಡುಗಡೆಗೊಳಿಸಲಾಯಿತು. ಮುಂದಿನ ವರ್ಷ ನಡೆಯಲಿರುವ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳನ್ನೂ ಪ್ರಕಟಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಸಂಘ ದುಬೈ ಮತ್ತು ಕನ್ನಡಿಗರ ಕೂಟ ದುಬೈ ವತಿಯಿಂದ ಡಾ. ರೊನಾಲ್ಡ್ ಕೊಲಾಸೊ ಅವರಿಗೆ ‘ಗ್ಲೋಬಲ್ ಐಕಾನ್ ಆಫ್ ಯುನಿಟಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎರಡೂ ಸಂಘಟನೆಗಳು ಒಂದೇ ವೇದಿಕೆಯಲ್ಲಿ ರಾಜ್ಯೋತ್ಸವ ಆಚರಿಸುವಂತೆ ಮಾಡುವಲ್ಲಿ ಅವರು ವಹಿಸಿದ ಪ್ರಮುಖ ಪಾತ್ರ ಹಾಗೂ ಮಾತಿನಂತೆ ನಡೆದು ತೋರಿಸುವ ವ್ಯಕ್ತಿತ್ವವನ್ನು ಗುರುತಿಸಿ ಈ ಗೌರವ ನೀಡಲಾಯಿತು. ಇದೇ ವೇಳೆ ಡಾ. ತುಂಬೆ ಮೊಯ್ದೀನ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಂಘ ದುಬೈ ವತಿಯಿಂದ ಉದ್ಯಮಿ ಹಾಗೂ ಸಮಾಜಸೇವಕ ರಾಮಚಂದ್ರ ಹೆಗ್ಡೆ ಅವರಿಗೆ ಪ್ರತಿಷ್ಠಿತ ‘ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಸುವಿನ ಹಾಲಿನಂತೆ ತಮ್ಮ ಸಂಪತ್ತು ಸಮಾಜದ ಒಳಿತಿಗಾಗಿ ಉಪಯೋಗವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಯಕ್ಷಗಾನ ಕಲಾವಿದ ಕಿಶೋರ್ ಗಟ್ಟಿ ಉಚ್ಚಿಲ್ ಅವರಿಗೆ ‘ಮೊಹಮ್ಮದ್ ಸಮೀರ್ ಸೇವಾ ರತ್ನ’, ಯಕ್ಷಗಾನ ಕಲಾವಿದ ಶೇಖರ್ ಡಿ. ಶೆಟ್ಟಿಗಾರ್ ಅವರಿಗೆ ‘ಗಿರೀಶ್ ಶೆಟ್ಟಿ ಸೇವಾ ರತ್ನ’ ಹಾಗೂ ಸಾಮಾಜಿಕ ಕಾರ್ಯಕರ್ತ ಶೇಖ್ ಮುಝಾಫರ್ ಅವರಿಗೆ ‘ಯುವರಾಜ್ ದೇವಾಡಿಗ ಸೇವಾ ರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪ್ರಾಣಿ ಸಂರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ರಜನಿ ಶೆಟ್ಟಿ ಅವರಿಗೆ ವಿಶೇಷ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ದುಬೈನಲ್ಲಿ ವಕೀಲ ವೃತ್ತಿಯಲ್ಲಿ ಮುಂಚೂಣಿಯಲ್ಲಿದ್ದು, ಕನ್ನಡ ಸಮುದಾಯಕ್ಕೆ ಕಾನೂನು ನೆರವು ನೀಡುತ್ತಿರುವ ಸುನೀಲ್ ಅಂಬಲವೇಲಿ ಅವರಿಗೆ ‘ಕಮ್ಯುನಿಟಿ ಲಾಯರ್ ಆಫ್ ದಿ ಇಯರ್–2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಚಿತ್ರಕಲಾವಿದೆ ಮಾನಸ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಪ್ರಸಿದ್ಧ ಸಮಾಜಸೇವಕ ಹಾಗೂ ಜೈ ಫೌಂಡೇಶನ್ ಸ್ಥಾಪಕ ಜಯಕುಮಾರ್ ಅವರನ್ನೂ ಗೌರವಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡಿಗರಾದ ಆಯುಷ್ ಮತ್ತು ಆತಿಶ್ ಅವರನ್ನು ರಾಜ್ಯೋತ್ಸವದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಿಬಿಎಸ್‌ಇ ಯುಎಇ ಅಂಡರ್-14 ವಾಲಿಬಾಲ್ ಚಾಂಪಿಯನ್ ತಂಡದ ಸದಸ್ಯರಾಗಿರುವ ಇವರು, ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸಿಬಿಎಸ್‌ಇ ಯುಎಇ ಗಲ್ಫ್ ವಲಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ನಾಯಕತ್ವ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆಗೈದು ಕೋಡ್‌ಅವರ್ ಯುಎಇ ಹಾಗೂ ಇನ್ನೋಟೆಕ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಅಡ್ರಿಯನ್ ರೋಜರ್ ಮೆನೆಜಸ್ ಅವರನ್ನೂ ಗೌರವಿಸಲಾಯಿತು.

ಕನ್ನಡಿಗರ ಕೂಟ ದುಬೈ ವತಿಯಿಂದ ಖ್ಯಾತ ಲೇಖಕ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳ ನಿರೂಪಕ ಡಾ. ನಾ. ಸೋಮೇಶ್ವರ ಅವರಿಗೆ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಮಾನಯಾನ ಕ್ಷೇತ್ರ, ನಾಯಕತ್ವ, ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಾಧನೆಗೈದ ರಾಜೇಶ್ ಮರ್ವಿನ್ ಅಲೋಸಿಯಸ್ ಸಿಕ್ವೇರ ಅವರಿಗೆ ‘ಡಾ. ಪುನೀತ್ ರಾಜ್‌ಕುಮಾರ್ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು. ಕನ್ನಡಪರ ಸಂಘಟಕ ಹಾಗೂ ಸಾಧಕ ಸಿ.ಎಂ. ನಾಗರಾಜ್ ಅವರಿಗೆ ‘ಕನ್ನಡ ಸೇವಾ ರತ್ನ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ನಾ. ಸೋಮೇಶ್ವರ ಅವರು, ಈ ಗೌರವವು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ವಿವಿಧ ಹೂವುಗಳಿಂದ ಮಕರಂದ ಸಂಗ್ರಹಿಸಿ ಅದನ್ನು ಜೇನಿನ ರೂಪದಲ್ಲಿ ಜನರಿಗೆ ತಲುಪಿಸುವ ಜೇನುನೊಣದಂತೆ ತಾವು ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಕಾರ್ಯವೈಖರಿಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಲೇಖಕ ಇರ್ಷಾದ್ ಮೂಡುಬಿದಿರೆ ಅವರ ‘ಬದುಕಿನ ಸವಾರಿ’ ಪ್ರಬಂಧ ಸಂಕಲನವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮೆರವಣಿಗೆ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಅನಾವರಣಗೊಳಿಸಿತು. ಹುಲಿವೇಷ, ಕಂಸಾಳೆ, ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ಭೂತಾರಾಧನೆ ಹಾಗೂ ಚೆಂಡೆ ವಾದನಗಳ ಆಕರ್ಷಕ ಪ್ರದರ್ಶನಗಳು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಸಂಜೆಯ ಪ್ರಮುಖ ಆಕರ್ಷಣೆಯಾಗಿ ಖ್ಯಾತ ಕಲಾವಿದರಾದ ವಸುಶ್ರೀ ಹಳೇಮನೆ, ಭೂಮಿಕಾ ಮಧುಸೂದನ್ ಮತ್ತು ಸುಪ್ರೀತ್ ಫಾಲ್ಗುಣ ಅವರಿಂದ ಮೂಡಿಬಂದ ಭಾವಪೂರ್ಣ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ಕುಮಾರಿ ಸಾಯಿಶ್ರುತಿ ಪಿಲಿಕಜೆ ಅವರ ವೆಂಟ್ರಿಲೋಕ್ವಿಸ್ಟ್ ಪ್ರದರ್ಶನ, ಟೀಮ್ ನೃತ್ಯಪ್ರಿಯ ತಂಡದ ‘ತುಳುನಾಡ ಪಿಲಿ ನಲಿಕೆ’, ಪ್ರದೀಪ್ ಬಾರ್ಬೋಜಾ ಮತ್ತು ತಂಡದವರ ‘ಸಾಂಗೊನ್ ಮುಗ್ಡಾನ’ ಹಾಸ್ಯ ಪ್ರಹಸನ ಹಾಗೂ ಸಹಚೇತನ ನಾಟ್ಯಾಲಯ ಸೇರಿದಂತೆ ಯುಎಇಯ ವಿವಿಧ ನೃತ್ಯ ತಂಡಗಳ ಆಕರ್ಷಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ಇದೇ ಸಂದರ್ಭದಲ್ಲಿ ‘ಕನ್ನಡ ಮಿತ್ರರು’ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ‘ಕನ್ನಡ ಪಾಠಶಾಲೆ ದುಬೈ’ಯ 13ನೇ ವರ್ಷದ ತರಗತಿಗಳಿಗೆ ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅನಿವಾಸಿ ಕನ್ನಡ ಮಕ್ಕಳಲ್ಲಿ ಕನ್ನಡ ಭಾಷೆಯ ಕಲಿಕೆ ಮತ್ತು ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡೆಗಳು ಕೂಡ ವಿಶೇಷ ಆಕರ್ಷಣೆಯಾಗಿದ್ದವು. ಕುಂಟೆಬಿಲ್ಲೆ, ಚೌಕಾಬಾರ, ಕುಡಿಕೆ ಒಡೆಯುವುದು, ಸೈಕಲ್ ಟೈರ್ ರೇಸ್, ನದಿದಡ ಸೇರಿದಂತೆ ಹಲವು ಸಾಂಪ್ರದಾಯಿಕ ಆಟಗಳಲ್ಲಿ ಕನ್ನಡಿಗರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಸಂಭ್ರಮಿಸಿದವರು ದುಬೈ ನೆಲದಲ್ಲೇ ಗ್ರಾಮೀಣ ಕ್ರೀಡೆಗಳ ಸೊಗಡನ್ನು ಮರುಸೃಷ್ಟಿಸಿದರು.

ಕರ್ನಾಟಕ ಸಂಘ ದುಬೈ ಉಪಾಧ್ಯಕ್ಷ ದಯಾ ಕಿರೋಡಿಯನ್ ಅವರು ಎಲ್ಲರನ್ನು ಸ್ವಾಗತಿಸಿದರು. ಖ್ಯಾತ ಅಂತಾರಾಷ್ಟ್ರೀಯ ನಿರೂಪಕಿ ಸವಿ ಪ್ರಕಾಶ್ ಮತ್ತು ಯುಎಇಯ ಖ್ಯಾತ ನಿರೂಪಕಿ ಆರತಿ ಅಡಿಗ ಅವರ ನಿರೂಪಣೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಖಜಾಂಚಿ ನಾಗರಾಜ್ ರಾವ್, ಮನರಂಜನಾ ಕಾರ್ಯದರ್ಶಿ ವಿನುತಾ ಪ್ರಕಾಶ್ ಹಾಗೂ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ., ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಪ್ರಧಾನ ಕಾರ್ಯದರ್ಶಿ ಚೇತನ್ ಸುಬ್ರಹ್ಮಣ್ಯ, ಜಂಟಿ ಕಾರ್ಯದರ್ಶಿ ದೀಪಕ್ ಸೋಮಶೇಖರ, ಖಜಾಂಚಿ ವಿನೀತ್ ರಾಜ್ ಸೇರಿದಂತೆ ಎರಡೂ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಒಟ್ಟಿನಲ್ಲಿ, ಎರಡು ಪ್ರಮುಖ ಕನ್ನಡ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕೈಜೋಡಿಸಿ ಆಯೋಜಿಸಿದ ದುಬೈ ಕರ್ನಾಟಕ ರಾಜ್ಯೋತ್ಸವ–2026, ಅನಿವಾಸಿ ಕನ್ನಡಿಗರ ಒಗ್ಗಟ್ಟು, ಕನ್ನಡ ಭಾಷೆಯ ಮೇಲಿನ ಅಭಿಮಾನ ಹಾಗೂ ನಾಡಿನ ಸಂಸ್ಕೃತಿಯ ಸಂರಕ್ಷಣೆಗೆ ಹೊಸ ದಿಕ್ಕು ತೋರಿದ ಸ್ಮರಣೀಯ ಉತ್ಸವವಾಗಿ ಮೂಡಿಬಂತು.

SHARE
Loading spinner

Leave a Reply

Your email address will not be published. Required fields are marked *

error: Content is protected !!