ಮಂಗಳೂರು: 1986ರಲ್ಲಿ ಸಣ್ಣ ಗೃಹ ಕೈಗಾರಿಕೆಯಾಗಿ ಆರಂಭಗೊಂಡ ಬೋನ್ ಮಸಾಲಾ ಆ್ಯಂಡ್ ಫುಡ್ ಪ್ರಾಡಕ್ಟ್ಸ್ ಸಂಸ್ಥೆ ನಾಲ್ಕು ದಶಕಗಳ ಯಶಸ್ವಿ ಪಯಣವನ್ನು ಪೂರ್ಣಗೊಳಿಸಿದ್ದು, ಇದರ ಸಂಭ್ರಮಾಚರಣೆ ನ.28ರಂದು ಮಂಗಳೂರಿನ ಜೆಪ್ಪಿನಮೊಗರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಮುಖರಾದ ರೆನಿಶಾ ಸಿಕ್ವೇರಾ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವರ್ಷಗಳ ಹಿಂದೆ ಮಸಾಲೆ ಪದಾರ್ಥಗಳು ಮತ್ತು ಮಿಶ್ರ ಮಸಾಲೆಗಳ ಉತ್ಪಾದನೆಯೊಂದಿಗೆ ಆರಂಭಗೊಂಡ ಸಂಸ್ಥೆ ಇಂದು ವೈವಿಧ್ಯಮಯ ಆಹಾರ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿ ಬೆಳೆದಿದೆ. ಗ್ರಾಹಕರ ವಿಶ್ವಾಸ, ಗುಣಮಟ್ಟ ಮತ್ತು ಅಸಲಿ ರುಚಿಗೆ ಆದ್ಯತೆ ನೀಡುತ್ತಾ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ಪ್ರಸ್ತುತ ಸಂಸ್ಥೆಯು ಮಸಾಲೆ ಪದಾರ್ಥಗಳು, ವಿವಿಧ ಮಿಶ್ರ ಮಸಾಲೆಗಳು, ಸಾಸ್, ನೂಡಲ್ಸ್, ಸ್ನ್ಯಾಕ್ ಮಿಕ್ಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಅಕ್ಕಿ ಶಾವಿಗೆ ಸೇರಿದಂತೆ ಒಟ್ಟು 92 ಬಗೆಯ ಉತ್ಪನ್ನಗಳನ್ನು 275 ವಿವಿಧ ರೂಪಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಸುಮಾರು 200 ಮಂದಿ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯು ಜೋಸೆಫ್ ಡಿಸಿಲ್ವ ಮತ್ತು ನಿಖಿಲ್ ಡಿಸಿಲ್ವ ಅವರ ನಿರ್ದೇಶಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಕಳೆದ ನಾಲ್ಕು ದಶಕಗಳಿಂದ ಗ್ರಾಹಕರಿಗೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಒದಗಿಸುವುದರ ಜತೆಗೆ ಅಡುಗೆಯನ್ನು ಸುಲಭ, ಅನುಕೂಲಕರ ಹಾಗೂ ರುಚಿಕರವಾಗಿಸುವ ನಿಟ್ಟಿನಲ್ಲಿ ಸಂಸ್ಥೆ ಶ್ರಮಿಸುತ್ತಿದೆ. ಗ್ರಾಹಕರು, ವಿತರಕರು, ಚಿಲ್ಲರೆ ವ್ಯಾಪಾರಿಗಳು, ಉದ್ಯಮ ಪಾಲುದಾರರು ಹಾಗೂ ಸಿಬ್ಬಂದಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿಯೂ ಉತ್ಪನ್ನಗಳ ವೈವಿಧ್ಯತೆಯನ್ನು ಹೆಚ್ಚಿಸುವುದು, ಹೊಸ ಅವಕಾಶಗಳನ್ನು ಬಳಸಿಕೊಳ್ಳುವುದು ಹಾಗೂ ಗುಣಮಟ್ಟದ ಆಹಾರ ಉತ್ಪನ್ನಗಳ ಮೂಲಕ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.ನ.28ರಂದು ಬೆಳಗ್ಗೆ 10.30ರಿಂದ ಜೆಪ್ಪಿನಮೊಗರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ 40ನೇ ವರ್ಷದ ಸಂಭ್ರಮಾಚರಣೆ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ನಿಖಿಲ್ ಡಿಸಿಲ್ವ, ಮಾರಿನ್ ಡಿಸಿಲ್ವ, ಜೋಸೆಫ್ ಡಿಸಿಲ್ವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

