ಕ.ಸಾ.ಪ. ಪುತ್ತೂರು 2015ರ ದತ್ತಿ ನಿಧಿ ಕಾರ್ಯಕ್ರಮ: ‘ಜೆನ್ ಝೀ ಮತ್ತು ಸಾಹಿತ್ಯ’ ಕುರಿತು ವಿಶೇಷ ಉಪನ್ಯಾಸ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಹಾಗೂ ನರೇಂದ್ರ ಪದವಿ ಪೂರ್ವ ಕಾಲೇಜು, ತೆಂಕಿಲ ಪುತ್ತೂರು ಇದರ ಆಶ್ರಯದಲ್ಲಿ ಕ.ಸಾ.ಪ. ಪುತ್ತೂರು 2015ರ ದತ್ತಿ ನಿಧಿ ಕಾರ್ಯಕ್ರಮವು ಗುರುವಾರ ಮಧ್ಯಾಹ್ನ ನರೇಂದ್ರ ಪದವಿ ಪೂರ್ವ ಕಾಲೇಜಿನ ಹಂಸಧ್ವನಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲರು ಹಾಗೂ 18ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು, “ವಿದ್ಯಾರ್ಥಿಗಳಿಗೆ ತಾಳ್ಮೆ ಹಾಗೂ ಏಕಾಗ್ರತೆ ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಮೂಲಕ ಭಾಷೆಯಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಸಾಹಿತ್ಯ ಶಕ್ತಿಯನ್ನು ಬೆಳೆಸಿಕೊಳ್ಳಬೇಕು” ಎಂದು ಶುಭ ಹಾರೈಸಿದರು.

‘ಜೆನ್ ಝೀ ಮತ್ತು ಸಾಹಿತ್ಯ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ವಿವೇಕಾನಂದ ಪದವಿ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ. ವರದರಾಜ ಚಂದ್ರಗಿರಿ ಅವರು ಮಾತನಾಡಿ, “ಹಿಂದಿನ ತಲೆಮಾರಿನವರಿಗೂ ಮತ್ತು ಇಂದಿನ ವಿದ್ಯಾರ್ಥಿಗಳ ಯೋಚನಾ ಲಹರಿಗೂ ಸಾಕಷ್ಟು ವ್ಯತ್ಯಾಸವಿದೆ. ‘ಕಣ್ಣು ತೆರೆಯಿತು – ತಾವರೆ ಅರಳಿತು’ ಎಂದರೆ ಅದು ಪ್ರಕೃತಿಯ ನೈಸರ್ಗಿಕ ಕ್ರಿಯೆಯಾಗುತ್ತದೆ; ಆದರೆ ‘ಕಣ್ಣು ಅರಳಿತು – ತಾವರೆ ತೆರೆಯಿತು’ ಎಂದಾಗ ಅದು ಕಾವ್ಯವಾಗುತ್ತದೆ. ಒಬ್ಬ ವ್ಯಕ್ತಿಯ ನಾಲ್ಕು ಆಯಾಮಗಳನ್ನು ತೋರಿಸಲು ಸಾಹಿತ್ಯಕ್ಕೆ ಮಾತ್ರ ಸಾಧ್ಯ, ಅದುವೇ ಸಾಹಿತ್ಯದ ನಿಜವಾದ ಶಕ್ತಿ” ಎಂದು ಬಣ್ಣಿಸಿದರು. ದ.ರಾ. ಬೇಂದ್ರೆ ಅವರ ‘ನಾಕು ತಂತಿ’ ಕೃತಿಯ ಉದಾಹರಣೆಗಳನ್ನು ನೀಡುವ ಮೂಲಕ ಜೆನ್ ಝೀ ತಲೆಮಾರು ಮತ್ತು ಸಾಹಿತ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಶಾಂತ ಪುತ್ತೂರು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತಾ, “ಅಂತರ್ಜಾಲತಾಣದಲ್ಲಿ ಅನೇಕ ಉಪಯುಕ್ತ ಸಂಗತಿಗಳಿವೆ. ಅವುಗಳ ಹುಡುಕಾಟ ನಡೆಸುವಾಗ ಹಿರಿಯರ ಅಥವಾ ತಜ್ಞರ ಮಾರ್ಗದರ್ಶನ ಪಡೆದು ಸದುಪಯೋಗಪಡಿಸಿಕೊಂಡಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅದು ಪೂರಕವಾಗಬಲ್ಲದು”ಹಾಗೆಯೇ ದತ್ತಿನಿಧಿ ಇರಿಸುವುದರಿಂದ ನಿರಂತರ ಸಾಹಿತ್ಯ ಚಟುವಟಿಕೆ ಮಾಡಲು ಅನುಕೂಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ವಹಿಸಿದ್ದರು. ಶುಭನುಡಿಗಳನ್ನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ನಾಡಗೀತೆ ಹಾಗೂ ಪ್ರಾರ್ಥನೆ ನೆರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನುಭಾಗ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಗಣ್ಯರಿಗೆ ಕನ್ನಡ ಶಾಲು ಹಾಗೂ ಪುಸ್ತಕ ನೀಡಿ ಗೌರವಿಸಿದರು ಹಾಗೂ ಉದ್ಘಾಟಕರ ಮತ್ತು ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು. ಶ್ರೀಮತಿ ಶಂಕರಿ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರು ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!