ಅಂಗನವಾಡಿ ಆವರಣ ಗೋಡೆ ನಿರ್ಮಾಣಕ್ಕೆ ವಿರೋಧ: ಸ್ಥಳದಲ್ಲಿ ಉದ್ವಿಗ್ನತೆ : ಪ್ರತಿಭಟನೆ : 55 ಮಂದಿ ವಿರುದ್ಧ ಕೇಸು ದಾಖಲು

​ಮಂಜೇಶ್ವರ: ಉದ್ಯಾವರ ಜುಮಾ ಮಸೀದಿ ಪರಿಸರದಲ್ಲಿ ಕಳೆದ 22 ವರ್ಷಗಳಿಂದ ಕಾರ್ಯಾಚರಿಸುತ್ತಿರುವ 22ನೇ ನಂಬರ್ ಅಂಗನವಾಡಿಯ ಆವರಣ ಗೋಡೆ ನಿರ್ಮಾಣ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಿರೋಧ ವ್ಯಕ್ತವಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ.

​ಕಳೆದ ಹಲವು ವರ್ಷಗಳ ಹಿಂದೆಯೇ ಈ ಅಂಗನವಾಡಿಯ ಆವರಣ ಗೋಡೆ ಕುಸಿದು ಬಿದ್ದಿತ್ತು. ಪ್ರಸ್ತುತ ಇಲ್ಲಿ 22 ಪುಟ್ಟ ಮಕ್ಕಳು ಕಲಿಯುತ್ತಿದ್ದು, ಆವರಣ ಗೋಡೆ ಇಲ್ಲದ ಕಾರಣ ಕೊಠಡಿಗಳ ಒಳಗೆ ವಿಷಜಂತುಗಳು ಬರುತ್ತಿವೆ ಎಂಬ ಆತಂಕ ಪೋಷಕರಲ್ಲಿತ್ತು.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪಂಚಾಯತ್ ಅನುದಾನದಡಿ ನೂತನ ಆವರಣ ಗೋಡೆ ನಿರ್ಮಿಸಲು ಮುಂದಾದಾಗ, ಸಮೀಪದ ಹಿಂದೂ ರುದ್ರಭೂಮಿ ಸಮಿತಿಯ ಸದಸ್ಯರು ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

​ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸರು ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿ, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಪೊಲೀಸರ ಈ ಕ್ರಮದಿಂದ ಆಕ್ರೋಶಗೊಂಡ ಅಂಗನವಾಡಿ ಮಕ್ಕಳ ಪೋಷಕರು, ಜನಪ್ರತಿನಿಧಿಗಳು ಹಾಗೂ ಸ್ಥಳೀಯರು, ಮಕ್ಕಳ ಸುರಕ್ಷತೆಗಾಗಿ ಆವರಣ ಗೋಡೆ ನಿರ್ಮಿಸಲೇಬೇಕೆಂದು ಆಗ್ರಹಿಸಿ ಸ್ಥಳದಲ್ಲೇ ಪ್ರತಿಭಟನಾ ಧರಣಿ ನಡೆಸಿದರು.

​ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಎಡಿಎಂ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಲೋಕೇಶ್ ನೋಂಡಾ, ಜಯರಾಂ, ಭೂಷಣ್, ಹೃತಿತ್, ಶ್ರೇಯಸ್ ಸೇರಿದಂತೆ ಕಂಡರೆ ಗುರುತು ಪತ್ತೆ ಹಚ್ಚಬಹುದಾದ 50 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!