ನವದೆಹಲಿ: ಭಾರತದ ಮೇಲೆ ಶೇ.25ರವರೆಗೆ ಹೆಚ್ಚುವರಿ ಆಮದು ಸುಂಕ ವಿಧಿಸಲು ಅಮೆರಿಕ ಕೈಗೊಂಡಿರುವ ಕ್ರಮವನ್ನು ಸಿಪಿಐ(ಎಂ) ಪೊಲಿಟ್‌ಬ್ಯೂರೋ ತೀವ್ರವಾಗಿ ಖಂಡಿಸಿದೆ.ಅಧಿಕ ಉತ್ಪಾದನಾ ಸಾಮರ್ಥ್ಯ ಮತ್ತು ಬಲವಂತದ ಕಾರ್ಮಿಕ ಪದ್ಧತಿಯ ಆರೋಪಗಳನ್ನು ಮುಂದಿಟ್ಟುಕೊಂಡು ಅಮೆರಿಕ ಕೈಗೊಂಡಿರುವ ಕ್ರಮಗಳು ಆಧಾರರಹಿತವಾಗಿವೆ. ಇದು ಭಾರತವನ್ನು ಬೆದರಿಸುವ ಹಾಗೂ ಅಮೆರಿಕದ ಹಿತಾಸಕ್ತಿಗಳಿಗೆ ಮಣಿಯುವಂತೆ ಮಾಡಲು ನಡೆಸುತ್ತಿರುವ ಬ್ಲ್ಯಾಕ್‌ಮೇಲ್ ತಂತ್ರವಾಗಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಅಮೆರಿಕದ ಒತ್ತಡವನ್ನು ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿರುವ ಸಿಪಿಐ(ಎಂ) ಪೊಲಿಟ್‌ಬ್ಯೂರೋ, ಅಮೆರಿಕದ ಕ್ರಮವನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ವಿರೋಧಿಸಬೇಕು ಹಾಗೂ ವ್ಯಾಪಾರ ಮಾತುಕತೆಗಳಲ್ಲಿ ದೃಢವಾದ ನಿಲುವು ತಳೆಯಬೇಕು ಎಂದು ಒತ್ತಾಯಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಭಾರತದ ಉತ್ಪನ್ನಗಳ ಮೇಲೆ ಶೇ.25ರವರೆಗೆ ಹಾಗೂ ಚೀನಾದ ಉತ್ಪನ್ನಗಳ ಮೇಲೆ ಶೇ.40ರವರೆಗೆ ಹೆಚ್ಚುವರಿ ಸುಂಕ ವಿಧಿಸಲು ನಿರ್ಧರಿಸಿದೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಮುಂದುವರಿದಿರುವ ಸಂದರ್ಭದಲ್ಲೇ ಅಮೆರಿಕ ಈ ಹೊಸ ಕ್ರಮಕ್ಕೆ ಮುಂದಾಗಿದೆ.

ಇದಲ್ಲದೆ, ಯುರೋಪಿಯನ್ ಒಕ್ಕೂಟ, ಬಾಂಗ್ಲಾದೇಶ, ಜಪಾನ್, ಸ್ವಿಟ್ಜರ್‌ಲ್ಯಾಂಡ್ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ.20ರವರೆಗೆ ಸುಂಕ ವಿಧಿಸುವ ಬಗ್ಗೆಯೂ ಅಮೆರಿಕ ಚಿಂತನೆ ನಡೆಸುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಕೈಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಇತರ ದೇಶಗಳ ಮಾರುಕಟ್ಟೆಗಳಿಗೆ ಹಾನಿ ಉಂಟುಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

