ಮಂಗಳೂರು: “ಬೆಂಕಿ ಬಿದ್ದಿದೆ ಮನೆಗೆ, ಓ ಬೇಗ ಬನ್ನಿ” ಎಂಬ ಕರೆಯೊಂದಿಗೆ ಕಾಸರಗೋಡಿನ ಕನ್ನಡಿಗರಿಗೆ ಆದ ಅನ್ಯಾಯದ ವಿರುದ್ಧ ಸೆಟೆದು ನಿಂತು, ತಮ್ಮ ಜೀವನವನ್ನೇ ಕನ್ನಡ ಭಾಷೆ, ನಾಡು-ನುಡಿ ಮತ್ತು ಸಂಸ್ಕೃತಿಯ ಹೋರಾಟಕ್ಕೆ ಮುಡಿಪಾಗಿಟ್ಟ ಹಿರಿಯ ಸಾಹಿತಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಸ್ಮರಣಾರ್ಥ ಹುಟ್ಟೂರು ಪೆರಡಾಲದಲ್ಲಿ ನಿರ್ಮಿಸಿರುವ ಕನ್ನಡ ಸಂಸ್ಕೃತಿ ಭವನ ಲೋಕಾರ್ಪಣೆಗೆ ಸಜ್ಜಾಗಿದೆ.

ಪೆರಡಾಲದ ಕವಿತಾ ಕುಟೀರದ ಸಮೀಪದ ಕಲ್ಲಕಳಯ ಬತ್ತೇರಿ ಎಂಬಲ್ಲಿ ರೈ ಅವರ ಕುಟುಂಬದವರು ಉದಾರವಾಗಿ ನೀಡಿರುವ 31 ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ಭವನ ನಿರ್ಮಿಸಲಾಗಿದೆ. ನವೆಂಬರ್ 30ರಂದು ಭವನದ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಕರ್ನಾಟಕದ ಸಚಿವರು, ಕೇರಳದ ಸಂಸದರು, ಅಧಿಕಾರಿಗಳು ಸೇರಿದಂತೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 2 ಕೋಟಿ ರೂ. ಅನುದಾನದಲ್ಲಿ, ಪ್ರಾಧಿಕಾರದ ಉಸ್ತುವಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರವು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಕವಿತಾ ಕುಟೀರ ಕಟ್ಟಡ ನಿರ್ಮಾಣ ಸಮಿತಿಯ ಸಂಪೂರ್ಣ ಸಹಕಾರದೊಂದಿಗೆ ಈ ಮಹತ್ವದ ಯೋಜನೆ ಸಾಕಾರಗೊಂಡಿದೆ.

ಭವನದಲ್ಲಿ ಸುಸಜ್ಜಿತ ವೇದಿಕೆ, ಎರಡು ಕೊಠಡಿಗಳು, ಕಚೇರಿ ಹಾಗೂ ತಳಮಹಡಿಯಲ್ಲಿ ಸಭಾಂಗಣದ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಲ್ಮಹಡಿಯ ಅರ್ಧ ಭಾಗದಲ್ಲಿ ಬಾಲ್ಕನಿ ನಿರ್ಮಿಸಲಾಗಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಚಟುವಟಿಕೆಗಳಿಗೆ ಪೂರಕವಾದ ಕೇಂದ್ರವಾಗಿ ಈ ಭವನ ರೂಪುಗೊಂಡಿದ್ದು, ಗಡಿನಾಡಿನ ಕನ್ನಡಪರ ಚಟುವಟಿಕೆಗಳಿಗೆ ಹೊಸ ವೇದಿಕೆಯಾಗುವ ನಿರೀಕ್ಷೆಯಿದೆ.

