ಟೆಸ್ಟ್ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ 500 ರನ್ ಗಳಿಸುವ ದಿನ ದೂರವಿಲ್ಲ: ಕೆವಿನ್ ಪೀಟರ್ಸನ್

ನವದೆಹಲಿ: ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಇತ್ತೀಚೆಗೆ ಯುಎಇ ವಿರುದ್ಧ ಭಾರತದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಪ್ರದರ್ಶಿಸಿದ ಸ್ಫೋಟಕ ಬ್ಯಾಟಿಂಗ್ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸಿದೆ. ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ 15 ವರ್ಷದ ಯುವ ಆಟಗಾರನ ಆಟಕ್ಕೆ ಹಿರಿಯ ಕ್ರಿಕೆಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್, ವೈಭವ್ ಅವರ ಭವಿಷ್ಯದ ಕುರಿತು ಮಹತ್ವದ ಭವಿಷ್ಯ ನುಡಿದಿದ್ದಾರೆ.

ಯುಎಇ ಎ ತಂಡದ ವಿರುದ್ಧ ಕೇವಲ 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ವೈಭವ್, ಮುಂದಿನ ಐದು ವರ್ಷಗಳಲ್ಲಿ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 500 ರನ್ ಗಳಿಸಲಿದ್ದಾರೆ ಎಂದು ಪೀಟರ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಮುಂದಿನ ಐದು ವರ್ಷಗಳಲ್ಲಿ ವೈಭವ್ ಟೆಸ್ಟ್ ಪಂದ್ಯವೊಂದರಲ್ಲಿ 500 ರನ್ ಗಳಿಸಲಿದ್ದಾರೆ!” ಎಂದು ಬರೆದುಕೊಂಡಿದ್ದಾರೆ.

ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕಗಳಲ್ಲಿ ಒಂದನ್ನು ದಾಖಲಿಸಿರುವ ವೈಭವ್ ಅವರ ಪ್ರತಿಭೆಗೆ ವಿದೇಶಿ ಕ್ರಿಕೆಟಿಗರೊಬ್ಬರಿಂದ ದೊರೆತಿರುವ ಈ ಮೆಚ್ಚುಗೆ ವಿಶೇಷ ಗಮನ ಸೆಳೆದಿದೆ.

ಯುಎಇ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 53 ಎಸೆತಗಳಲ್ಲಿ 204 ರನ್ ಗಳಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳು ಹಾಗೂ ಏಳು ಬೌಂಡರಿಗಳು ಸೇರಿದ್ದವು. ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ ಅವರು, 52 ಎಸೆತಗಳಲ್ಲಿ ದ್ವಿಶತಕದ ಗಡಿ ದಾಟಿದರು.

ವೈಭವ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಕೇವಲ 14.2 ಓವರ್‌ಗಳಲ್ಲಿ 250 ರನ್‌ಗಳ ಗುರಿಯನ್ನು ತಲುಪಿತು. ಈ ಮೂಲಕ ಭಾರತ ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವುದರೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!