ಮಹಾರಾಷ್ಟ್ರದಲ್ಲಿ ಪೊಲೀಸ್ ವಾಹನದ ಅಟ್ಟಹಾಸ: ಬೈಕ್‌ಗೆ ಡಿಕ್ಕಿಯಾಗಿ ಮೂವರು ಬಾಲಕರ ಸಾವು

ಮಹಾರಾಷ್ಟ್ರ: ಅತಿವೇಗವಾಗಿ ಬಂದ ಪೊಲೀಸ್ ವಾಹನವು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಅಪ್ರಾಪ್ತ ಬಾಲಕರು ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಗಂಗಾಸಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಂಡಿಯಾ–ತಿರೋರಾ ರಸ್ತೆಯ ದಂಡೇಗಾಂವ್ ಬಸ್ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾರ್ತಿಕ್ ಬೃಜ್‌ಲಾಲ್ ಬಿಸೆನ್ (14), ಶಿವಪ್ರಸಾದ್ ಕಾಂಬ್ಳೆ (16) ಮತ್ತು ಜಿತೇಂದ್ರ ಬವಾಂಕರ್ (16) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಮೂವರು ಇಕೋಡಿಯಿಂದ ಗಂಗಾಜರಿಯ ಕಡೆಗೆ ತೆರಳುತ್ತಿದ್ದರು. ಈ ವೇಳೆ ಟಿಪ್ಪರ್ ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ, ಎದುರಿನಿಂದ ಅತಿವೇಗವಾಗಿ ಬಂದ ಪೊಲೀಸ್ ಇಲಾಖೆಯ 112 ERSS (ತುರ್ತು ಪ್ರತಿಕ್ರಿಯೆ ಸೇವೆ) ವಾಹನವು ಬೈಕ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಪೊಲೀಸರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಗೋರಖ್ ಭಾಮರೆ ಭರವಸೆ ನೀಡಿದ್ದಾರೆ. ಸ್ಥಳದಲ್ಲಿ ಶಾಂತಿ ಕಾಪಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಮೃತರ ಕುಟುಂಬಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ದೊರಕಿಸಲು ಪ್ರಯತ್ನಿಸುವುದಾಗಿ ಸ್ಥಳೀಯ ಶಾಸಕ ವಿನೋದ್ ಅಗರ್ವಾಲ್ ಭರವಸೆ ನೀಡಿದ್ದಾರೆ.

ಅಪಘಾತಕ್ಕೆ ಕಾರಣವಾದ ಪೊಲೀಸ್ ವಾಹನವನ್ನು ಚಲಾಯಿಸುತ್ತಿದ್ದ ಅಮಿತ್ ಮಹೂಲೆ ವಿರುದ್ಧ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಹಾಗೂ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!