ಮಂಗಳೂರು: ಪಾರಂಪರಿಕ ಕುಲಕಸುಬುಗಳ ಕಲೆ, ಕೌಶಲ್ಯ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಅನಾವರಣಗೊಳಿಸುವುದರ ಜೊತೆಗೆ ಆಧುನಿಕ ಆವಿಷ್ಕಾರ ಹಾಗೂ ತಂತ್ರಜ್ಞಾನಗಳೊಂದಿಗೆ ಅವುಗಳನ್ನು ಬೆಸೆಯುವ ಉದ್ದೇಶದಿಂದ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ದೇಶದಲ್ಲೇ ಪ್ರಪ್ರಥಮ ಬಾರಿಗೆ ‘ವಿಶ್ವ ಕೌಶಲಂ 2026’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಿಸೆಂಬರ್ 25, 26 ಮತ್ತು 27ರಂದು ಮೂರು ದಿನಗಳ ಕಾಲ ನಗರದ ಪುರಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಾರಂಪರಿಕ ಕುಲಕಸುಬುಗಳ ಪ್ರದರ್ಶನ, ತಾಂತ್ರಿಕ ವಿಚಾರಗೋಷ್ಠಿ, ಪ್ರಾತ್ಯಕ್ಷಿಕೆಗಳು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷರ ಮಾರ್ಗದರ್ಶನ ಹಾಗೂ ವಿಶೇಷ ಬೆಂಬಲ ದೊರೆಯುತ್ತಿದೆ. ಸಮಾಜದ ವಿವಿಧ ಸಂಘಟನೆಗಳು ಸಹಕಾರ ನೀಡುತ್ತಿವೆ. ವಿಶ್ವಕರ್ಮ ಸಹಕಾರ ಬ್ಯಾಂಕ್ ಮತ್ತು ಎಸ್.ಕೆ.ಜಿ. ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ ಕಾರ್ಯಕ್ರಮಕ್ಕೆ ಮಹತ್ವದ ಆರ್ಥಿಕ ಸಹಕಾರ ನೀಡುತ್ತಿವೆ ಎಂದರು.
ಕಾರ್ಯಕ್ರಮವನ್ನು ಮೂರು ಪ್ರಮುಖ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ತಾಂತ್ರಿಕ ಅಧಿವೇಶನಗಳು ಹಾಗೂ ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ. ಮಿನಿ ಹಾಲ್ನಲ್ಲಿ ಸಿಎಡಿ (CAD), 3ಡಿ ಪ್ರಿಂಟರ್, ಸಿಎನ್ಸಿ ಯಂತ್ರಗಳು ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಮತ್ತೊಂದು ವೇದಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಡಿಸೆಂಬರ್ 25ರ ಮಧ್ಯಾಹ್ನದಿಂದ 27ರ ರಾತ್ರಿ ತನಕ ಮೂರು ವೇದಿಕೆಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾರಂಪರಿಕ ಕುಲಕಸುಬುಗಳನ್ನು ಅವಲಂಬಿಸಿರುವ ಕುಶಲಕರ್ಮಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದಲ್ಲಿ ಒಂದು ಕಾಲದಲ್ಲಿ ಸುಮಾರು 8,000 ಸದಸ್ಯರಿದ್ದರೆ, ಪ್ರಸ್ತುತ ಈ ಸಂಖ್ಯೆ 3,000ಕ್ಕೆ ಇಳಿದಿದೆ. ಅವರಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವವರು ಸುಮಾರು 1,500 ಮಂದಿ ಮಾತ್ರ ಎಂಬ ಮಾಹಿತಿ ಇದೆ. ಕಬ್ಬಿಣದ ಕೆಲಸ ಮಾಡುವವರು ಬೆರಳೆಣಿಕೆಯಷ್ಟಿದ್ದಾರೆ. ಕಾಷ್ಠಶಿಲ್ಪ ಕ್ಷೇತ್ರದಲ್ಲಿ ನೂರು ಮಂದಿಯೊಳಗೆ ಕುಶಲಕರ್ಮಿಗಳಿದ್ದಾರೆ. ಶಿಲಾಶಿಲ್ಪ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 20ರಿಂದ 25 ಮಂದಿ ತೊಡಗಿಸಿಕೊಂಡಿದ್ದಾರೆ. ಎರಕಶಿಲ್ಪಿಗಳ ಸಂಖ್ಯೆಯೂ 50ರ ಒಳಗಿದೆ ಎಂದರು.
ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಪಾರಂಪರಿಕ ಕುಶಲಕರ್ಮಿಗಳ ಕೆಲಸದಲ್ಲಿ ವೇಗ ಮತ್ತು ಗುಣಮಟ್ಟ ಹೆಚ್ಚಿಸಲು ಸಾಧ್ಯವಿದೆ. ಇದಕ್ಕೆ ರಥ ನಿರ್ಮಾಣ ಕ್ಷೇತ್ರವೇ ಉತ್ತಮ ಉದಾಹರಣೆ. ಹಿಂದೆ ಒಂದು ರಥ ನಿರ್ಮಿಸಲು ಸುಮಾರು ಎರಡು ವರ್ಷಗಳು ಬೇಕಾಗುತ್ತಿದ್ದರೆ, ಈಗ ತಂತ್ರಜ್ಞಾನದ ನೆರವಿನಿಂದ ಕೇವಲ ಎರಡು ತಿಂಗಳಲ್ಲಿ ನಿರ್ಮಿಸಲು ಸಾಧ್ಯವಾಗುತ್ತಿದೆ. ಕೋಟೇಶ್ವರದ ರಾಜಗೋಪಾಲಾಚಾರಿ ಹಾಗೂ ಅವರ ತಂದೆ ಲಕ್ಷ್ಮೀನಾರಾಯಣ ಆಚಾರ್ಯರು ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಆದರೆ, ತಂತ್ರಜ್ಞಾನದಿಂದಲೇ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸಲು ಸಾಧ್ಯವಿಲ್ಲ. ರಥದ ಅಂತಿಮ ವಿನ್ಯಾಸ ಹಾಗೂ ಸೂಕ್ಷ್ಮ ಕೆತ್ತನೆಗಳಂತಹ ಕೆಲಸಗಳನ್ನು ಕೈಯಿಂದಲೇ ಮಾಡಬೇಕಾಗುತ್ತದೆ. ಹೀಗಾಗಿ ಪಾರಂಪರಿಕ ಕರಕೌಶಲ್ಯ ಮತ್ತು ಆಧುನಿಕ ತಂತ್ರಜ್ಞಾನ ಎರಡನ್ನೂ ಸಮನ್ವಯಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಪಾರಂಪರಿಕ ಕುಲಕಸುಬುಗಳ ಉಳಿವು, ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ಅವುಗಳ ಪರಿಚಯ ಮಾಡಿಸುವ ನಿಟ್ಟಿನಲ್ಲಿ ‘ವಿಶ್ವ ಕೌಶಲಂ 2026’ ಮಹತ್ವದ ವೇದಿಕೆಯಾಗಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಕಲಾಸಕ್ತರು ಹಾಗೂ ಕುಶಲಕರ್ಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಪ್ರಚಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಪ್ರಮುಖರಾದ ಉಪೇಂದ್ರ ಆಚಾರ್ಯ ಪೆರ್ಡೂರು, ಯಶವಂತ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ, ರತ್ನಾವತಿ ಬೈಕಾಡಿ, ಯಜ್ಞೇಶ್ ಆಚಾರ್ಯ, ಹರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

