ಕೋಝಿಕ್ಕೋಡ್‌ನ ತಾಮರಶ್ಶೇರಿಯಲ್ಲಿ 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ; ಇಬ್ಬರು ಖಾಸಗಿ ಬಸ್ ಸಿಬ್ಬಂದಿ ಬಂಧನ

ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಾಮರಶ್ಶೇರಿಯಲ್ಲಿ 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಇಬ್ಬರು ಖಾಸಗಿ ಬಸ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ಚಾಲಕ ಕೆ.ಕೆ. ಅನೀಶ್ ಮತ್ತು ಕ್ಲೀನರ್ ಪಿ.ಎಸ್. ಸಜಿತ್ ಬಂಧಿತ ಆರೋಪಿಗಳು. ಆರೋಪಿಗಳು ಯುವತಿಯ ತಂದೆಯ ಸ್ನೇಹಿತರು ಎನ್ನಲಾಗಿದೆ.

ಯುವತಿಯ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಆರೋಪಿಗಳು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಸ್‌ನೊಳಗೂ ಅತ್ಯಾಚಾರ ಎಸಗಿರುವ ಆರೋಪವಿದೆ.

ನರಿಕ್ಕುನಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಆರೋಪಿಗಳು ಕಾರಿನಲ್ಲಿ ಬಂದಿದ್ದರು. ಬಳಿಕ ಜ್ಯೂಸ್‌ನಲ್ಲಿ ಮಾದಕ ದ್ರವ್ಯ ಬೆರೆಸಿ ಯುವತಿಗೆ ಕುಡಿಸಿ, ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಯುವತಿಯ ಖಾಸಗಿ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡು, ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಿನ್ನೆ ಬಂಧಿಸಲಾದ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!