ಕಾಸರಗೋಡು: ಇಲ್ಲಿನ ನಗರಸಭೆಯ ಆರೋಗ್ಯ ವಿಭಾಗದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ಮಿಂಚಿನ ಪರಿಶೀಲನೆ ನಡೆಸಿದ್ದಾರೆ.
ನಗರಸಭೆ ವ್ಯಾಪ್ತಿಯ ಕೆಫೆಗಳು, ಕೂಲ್ಬಾರ್ಗಳು ಹಾಗೂ ಹೋಟೆಲುಗಳ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಗುಪ್ತ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆದಿದೆ.

ನಿಯಮಾವಳಿ ಪ್ರಕಾರ, ಕಿರಿಯ ಆರೋಗ್ಯ ನಿರೀಕ್ಷಕರು ಸಂಸ್ಥೆಗಳಿಗೆ ಖುದ್ದು ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಸೀಲು ಮಾಡಿ ನೀಡಬೇಕು. ಬಳಿಕ ಸಂಸ್ಥೆಯ ಮಾಲೀಕರು ಅವುಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದು ಪರೀಕ್ಷಿಸಬೇಕು.
ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತಿರುವುದು ಹಾಗೂ ಸಮರ್ಪಕ ತಪಾಸಣೆ ಪೂರ್ಣಗೊಳಿಸದೆಯೇ ಪರವಾನಗಿ ನವೀಕರಿಸುತ್ತಿರುವ ಬಗ್ಗೆ ವಿಜಿಲೆನ್ಸ್ಗೆ ದೂರುಗಳು ಬಂದಿದ್ದವು.
ಆರೋಗ್ಯ ವಿಭಾಗದ ಸಿಬ್ಬಂದಿ ಮತ್ತು ಸಂಸ್ಥೆಗಳ ಮಾಲೀಕರ ನಡುವಿನ ಅಪವಿತ್ರ ಮೈತ್ರಿಯೇ ಈ ಅಕ್ರಮಕ್ಕೆ ಕಾರಣವೇ ಎಂಬ ಆಯಾಮದಲ್ಲೂ ವಿಜಿಲೆನ್ಸ್ ತನಿಖೆ ನಡೆಸುತ್ತಿದೆ.
ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗುವ ಈ ಕ್ರಮದ ವಿರುದ್ಧ ವಿಜಿಲೆನ್ಸ್ ಡಿವೈಎಸ್ಪಿ ವಿಶ್ವಂಭರನ್ ನಾಯರ್ ನಿರ್ದೇಶನದಂತೆ, ವಿಜಿಲೆನ್ಸ್ ಇನ್ಸ್ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದ ತಂಡವು ಎಎಸ್ಐ ಜಯಚಂದ್ರನ್, ಎಸ್ಸಿಪಿಒ ಸಜೀಶ್ ಹಾಗೂ ಸಿಪಿಒಗಳಾದ ರಾಹುಲ್, ವಿಜೇಶ್ ಅವರೊಂದಿಗೆ ಕಾರ್ಯಾಚರಣೆ ಕೈಗೊಂಡಿತು.

