ಕಾಸರಗೋಡು: ದಕ್ಷಿಣ ಕನ್ನಡದ ನೆರೆಯ ಕೇರಳವು ವಿಶಿಷ್ಟವಾದ ಥೆಯ್ಯಂ ಆರಾಧನಾ ಸಂಪ್ರದಾಯಕ್ಕೆ ಪ್ರಸಿದ್ಧವಾಗಿದೆ. ತುಳುನಾಡಿನ ಭೂತಾರಾಧನೆಯಂತೆಯೇ ಕೇರಳದ ಉತ್ತರ ಭಾಗದಲ್ಲಿ ಆಚರಿಸಲ್ಪಡುವ ಥೆಯ್ಯಂ ಆರಾಧನೆಯು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಚಂದ್ರಗಿರಿ ನದಿಯ ದಕ್ಷಿಣ ಭಾಗದ ಪುಣ್ಯಕ್ಷೇತ್ರಗಳಾದ ಕಾವು ಮತ್ತು ದೇವಸ್ಥಾನಗಳಲ್ಲಿ ನಡೆಯುವ ಕಳಿಯಾಟ ಮಹೋತ್ಸವವು ವಿಶಿಷ್ಟ ಧಾರ್ಮಿಕ ಆಚರಣೆಯಾಗಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಯುವ ಇಲ್ಲಿನ ದೈವಚಾರಣೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಗಡಿಗಳನ್ನು ಮೀರಿ ಭಕ್ತರು ಆಗಮಿಸಿ ದೈವಗಳ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ.


ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕು ಚಿತ್ತಾರಿಯಲ್ಲಿರುವ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಈ ವರ್ಷದ ವಾರ್ಷಿಕ ಕಳಿಯಾಟ ಮಹೋತ್ಸವದ ಒಂದನೇ ದಿನವಾದ ನಿನ್ನೆ ಪುಮಾರುತನ್ ವೆಳ್ಳಾಟಂ ದೈವವು ಮಕ್ಕಳೊಂದಿಗೆ ಮಕ್ಕಳಂತೆಯೇ ಹೆಜ್ಜೆ ಹಾಕಿ,ವೀರಾವೇಶದಿಂದ ಕುಣಿದ ದೃಶ್ಯ ಭಕ್ತರ ನಯನಗಳಿಗೆ ಹಬ್ಬವಾಗಿತ್ತು. ದೈವದ ಈ ವಿಶಿಷ್ಟ ನರ್ತನ ನೆರೆದಿದ್ದ ಭಕ್ತರಲ್ಲಿ ಭಕ್ತಿಭಾವದೊಂದಿಗೆ ವಿಶೇಷ ಸಂತಸ ಮೂಡಿಸಿತು.

