ಕಾಸರಗೋಡು: ಕಯ್ಯಾರ ಕಿಞಣ್ಣ ರೈ ಅವರ ಸ್ಮರಣಾರ್ಥ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಬದಿಯಡ್ಕದಲ್ಲಿ ನಿರ್ಮಿಸಿರುವ ಕನ್ನಡ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಕರ್ನಾಟಕ ವಿಧಾನಸಭೆಯ ಬೆಳಗಾವಿ ಅಧಿವೇಶನ ಹಾಗೂ ಕೇರಳ ವಿಧಾನಸಭೆಯ ಕಲಾಪಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭವನದ ಉದ್ಘಾಟನೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಶೀಘ್ರದಲ್ಲೇ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಸುಮಾರು ₹2 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಗೊಂಡಿದ್ದು, ಉದ್ಘಾಟನೆಗೂ ಮುನ್ನ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಕಯ್ಯಾರ ಕಿಞಣ್ಣ ರೈ ಅವರ ಕುಟುಂಬದವರು ಉಚಿತವಾಗಿ ನೀಡಿರುವ 35 ಸೆಂಟ್ಸ್ ಜಾಗದಲ್ಲಿ ಈ ಭವನ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಪದಾಧಿಕಾರಿಗಳಾದ ಕಯ್ಯಾರ ಪ್ರಸನ್ನ ರೈ, ಎ.ಆರ್. ಸುಬ್ಬಯ್ಯಕಟ್ಟೆ, ಮಾಹಿನ್ ಕೇಳೋಟ್, ಅಖಿಲೇಶ್ ನಗುಮುಗಂ, ತಾರಾನಾಥ ರೈ ಹಾಗೂ ಅಶೋಕ ಉಪಸ್ಥಿತರಿದ್ದರು.

