ವಲಾಲ್ ಟೋಲ್ ಗೇಟ್ ವಿರುದ್ಧ ಜನಾಕ್ರೋಶ: ಟೋಲ್ ಕಿತ್ತೊಗೆಯುವವರೆಗೂ ಹೋರಾಟ ನಿರಂತರ — ಅನ್ವರ್ ಸಾದತ್ ಬಜತ್ತೂರು ಎಚ್ಚರಿಕೆ

ಮಂಗಳೂರು: ನಮ್ಮ ಊರಿನ ನೆಲದಲ್ಲಿ ತಲೆಎತ್ತಿರುವ ಟೋಲ್ ಗೇಟ್ ಅನ್ನು ಕಿತ್ತು ಬಿಸಾಡುವ ವಿಚಾರದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ; ಪಕ್ಷ, ಪಂಗಡ ಮತ್ತು ಜಾತಿಭೇದ ಮರೆತು ನಾವೆಲ್ಲರೂ ಒಂದಾಗಿ ಜನಶಕ್ತಿಯ ಮೂಲಕ ಈ ಟೋಲ್ ವ್ಯವಸ್ಥೆಯನ್ನು ಕೊನೆಗೊಳಿಸಬೇಕಿದೆ ಎಂದು SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಅವರು ಕರೆ ನೀಡಿದರು.
ವಲಾಲ್ ಟೋಲ್ ಗೇಟ್ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸಕರು ಅಥವಾ ಸಂಸದರು ಬರುತ್ತಾರೋ ಬಿಡುತ್ತಾರೋ ಅದು ಎರಡನೆಯ ವಿಚಾರ, ಆದರೆ ಸ್ಥಳೀಯ ನೋಂದಣಿಯ (KA-19, KA-20, KA-70) ವಾಹನಗಳಿಗೆ ಯಾವುದೇ ಕಾರಣಕ್ಕೂ ಟೋಲ್ ಕಟ್ಟುವುದಿಲ್ಲ ಎಂಬ ಸ್ವಯಂ ನಿರ್ಧಾರವನ್ನು ಜನರೇ ತೆಗೆದುಕೊಳ್ಳಬೇಕು ಎಂದರು. ಜನಶಕ್ತಿಯ ತೀರ್ಮಾನದ ಮುಂದೆ ಯಾವ ಸರ್ಕಾರವಾಗಲಿ, ಪ್ರಾಧಿಕಾರವಾಗಲಿ ನಿಲ್ಲಲು ಸಾಧ್ಯವಿಲ್ಲ ಎಂದು ಅವರು ಗುಡುಗಿದರು.


ಈ ದೇಶದಲ್ಲಿ ಮಗು ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದಕ್ಕೂ ತೆರಿಗೆ ಕಟ್ಟಬೇಕಾಗಿದೆ. ವಾಹನ ಖರೀದಿಸುವಾಗಲೇ ‘ಲೈಫ್ ಟೈಮ್ ರೋಡ್ ಟ್ಯಾಕ್ಸ್’ ಮತ್ತು ಸೆಸ್ ಕಟ್ಟಿದ ಮೇಲೂ, 23 ವರ್ಷಗಳಿಂದ ಟೋಲ್ ಹೆಸರಿನಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬ್ರಹ್ಮರಕೂಟ್ಲು ಟೋಲ್‌ನಲ್ಲಿ ವಾರ್ಷಿಕ 23 ಕೋಟಿ ರೂಪಾಯಿ ಸಂಗ್ರಹವಾಗುತ್ತಿದ್ದು, ಸರ್ಕಾರಕ್ಕೆ ಪಾವತಿಯಾಗುತ್ತಿರುವುದು ಕೇವಲ 10 ಕೋಟಿ ರೂಪಾಯಿ ಮಾತ್ರ; ಉಳಿದ 13 ಕೋಟಿ ರೂಪಾಯಿ ಯಾವ ಸಂಸದರು ಮತ್ತು ಶಾಸಕರ ಜೇಬಿಗೆ ಹೋಗುತ್ತಿದೆ ಹಾಗೂ ಯಾರ ಬೆನಾಮಿ ಹೆಸರಿನಲ್ಲಿ ಆಸ್ತಿಯಾಗುತ್ತಿದೆ ಎಂಬುದು ನಮಗೆ ತಿಳಿದಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಅಲ್ಲದೆ, ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಕನಿಷ್ಠ 250 ರೂಪಾಯಿ ಬ್ಯಾಲೆನ್ಸ್ ಇರಬೇಕೆಂಬ ವ್ಯವಸ್ಥೆಯೂ ಪ್ರಭಾವಿಯೊಬ್ಬರ ಮಗನ ಒಡೆತನದಲ್ಲಿದ್ದು, ಜನರನ್ನು ವಂಚಿಸಲಾಗುತ್ತಿದೆ ಎಂದರು.
ಪಣಕಜೆಯಲ್ಲಿ ಹೊಸ ಟೋಲ್ ಸಿದ್ಧವಾಗುವಾಗ ಇಲ್ಲಿನ ಟೋಲ್ ತೆಗೆಸುವುದಾಗಿ ಸಂಸದರು ನೀಡಿದ್ದ ಭರವಸೆ ಹುಸಿಯಾಗಿದೆ. ಪ್ರಭಾವಿ ರಾಜಕಾರಣಿಗಳೇ ಟೋಲ್ ಗುತ್ತಿಗೆ ಪಡೆದಿರುವುದರಿಂದ ಇದನ್ನು ಮುಚ್ಚಲು ಬಿಡುತ್ತಿಲ್ಲ. ನಾವು ರಸ್ತೆಗಿಳಿದು ‘ಜನರ ಕೋರ್ಟ್’ನಲ್ಲಿ ಹೋರಾಟ ನಡೆಸಿದರೆ ನ್ಯಾಯಾಲಯದ ತೀರ್ಪೂ ನಮ್ಮ ಪರವಾಗಿಯೇ ಬರಲಿದೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಯಾವುದೇ ಅನ್ಯಾಯವಾದರೂ ಒಂದೇ ಕರೆಗೆ ಎಲ್ಲರೂ ಒಗ್ಗಟ್ಟಾಗಿ ಬರಬೇಕು ಮತ್ತು ನಮ್ಮ ಊರಿನ ಟೋಲ್ ಗೇಟ್ ತೆರವುಗೊಳಿಸುವವರೆಗೂ ಈ ಹೋರಾಟವನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!