ನಾನು ಗಳಿಸಿದ ಜನ ಪ್ರೀತಿಯೇ ನನಗೆ ಶ್ರೀರಕ್ಷೆ”- ಎ.ಸಿ.ಭಂಡಾರಿ

“ನನಗೆ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ನನ್ನ ಜನರು ನನ್ನನ್ನು ಹೊಗಳಿ ಹೊನ್ನ ಶೂಲಕ್ಕೇರಿಸುತ್ತಿದ್ದಾರೆ. ಆದರೆ, ನಾನು, ಗಳಿಸಿದ ಜನ ಪ್ರೀತಿಯೇ ನನಗೆ ಶ್ರೀರಕ್ಷೆ ಮತ್ತು ನನಗದುವೇ ದೊಡ್ಡ ಗೌರವ, ಸನ್ಮಾನ ಎಲ್ಲವೂ ಹೌದು. ನನ್ನ ಎಳವೆಯಿಂದಲೂ ನಾನು ತುಳುವಿನ ಬಗೆಗೆ ವಿಶೇಷಾಭಿಮಾನವನ್ನು ಇರಿಸಿಕೊಂಡಿದ್ದೆ. ಮತ್ತು ಅದರ ಉಳಿವಿಗಾಗಿ ಎಂತಹಾ ಹೋರಟಕ್ಕೂ ನಾನು ಸದಾ ಸರ್ವದಾ ಸನ್ನದ್ಧ ಸ್ಥಿತಿಯಲ್ಲಿರುತ್ತೇನೆ ತುಳು ಕೂಟದ ಸ್ಥಾಪಕ ಸದಸ್ಯನಾಗಿ ನಾನು ಸೇವೆ ಸಲ್ಲಿಸಿದ ಕೂಟದಿಂದಲೇ ನನಗೆ ಸನ್ಮಾನ ದೊರೆಯುತ್ತಿರುವುದು ಸಂತಸ ವನ್ನು ತಂದಿದೆ. ಅದರಲ್ಲೂ ಹೇಮಾ ನಿಸರ್ಗರವರು ಮಹಿಳೆಯಾಗಿದ್ದರೂ ಬಹಳ ದೊಡ್ಡ ತುಳುಕೂಟದ ಅಧ್ಯಕ್ಷೆ ಯಾಗಿ ಯಶಸ್ಸನ್ನು ಸಾಧಿಸಿದ್ದಾರೆ. ಅವರಿಗೂ ನನ್ನ ಕೃತಜ್ಞತೆಗಳು” ಎಂದು ಧಾರ್ಮಿಕ ನಾಯಕ ಶ್ರೀ ಎ.ಸಿ.ಭಂಡಾರಿಯವರು ತುಳು ಕೂಟ (ರಿ)ಕುಡ್ಲ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮ ಹಂಪನಕಟ್ಟೆಯ ತುಳು ಕೂಟದ ಕಛೇರಿಯಲ್ಲಿ ಏರ್ಪಟಿತ್ತು.

” ಎ.ಸಿ.ಭಂಡಾರಿಯವರು ನಮಗೆ ಮನೆಯ ಯಜಮಾನನಿದ್ದಂತೆ. ನಮ್ಮ ಕುಟುಂಬದ ಹಿರಿಯನಿಗೆ ಪ್ರಶಸ್ತಿ ಬಂದಿರುವುದನ್ನು ಆಚರಿಸಲು ನಾವು ನಿರ್ಧರಿಸಿ, ಈ ಗೌರವಾರ್ಪಣೆಯನ್ನು ನಡೆಸಿದ್ದೇವೆ. ನಮ್ಮ ಕೂಟಕ್ಕೆ ಈಗಲೂ ಸಕಾಲಿಕ ಮಾರ್ಗದರ್ಶನವಿತ್ತು ನಡೆಸುತ್ತಿದ್ದಾರೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮುಂದಾಳುವಾದ ಎ.ಸಿ. ಭಂಡಾರಿಯವರಿಗೆ ನಾವು ಸದಾ ಋಣಿಗಳು” ಎ೦ದು ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗಹೇಳಿದರು. ಪಿ.ಮಹಾಬಲ ಚೌಟ, ವಾಮನ ಕೆ., ಶ್ರೀ ರಾಘವೇಂದ್ರ ಭಟ್ ಕುಡುಪು,ನಾರಾಯಣ ಬಿ.ಡಿ., ದಯಾ ಮಣಿ ವಿ.ಕೋಟ್ಯಾನ್, ದಿನೇಶ್ ಕುಂಪಲ, ರಮೇಶ್ ಕುಲಾಲ್ ಬಾಯಾರ್ ಅತಿಥಿಗಳಾಗಿದ್ದರು.


ಸದಸ್ಯ ಯೋಗೀಶ್ ಶೆಟ್ಟಿ, ಜೆಪ್ಪು ಭಂಡಾರಿಯವರ ಅಭಿನಂದನೆ ಮಾಡಿದರು. ಶ್ರೀಮತಿ ಕಾಮಾಕ್ಷಿಯವರು ಸನ್ಮಾನ ಪತ್ರ ವಾಚಿಸಿದರು. ರೊ. ಜೆ.ವಿ.ಶೆಟ್ಟಿ ಸ್ವಾಗತಿಸಿದರು. ನಾಗೇಶ ದೇವಾಡಿಗ ಪ್ರಾರ್ಥನೆ ನಡೆಸಿಕೊಟ್ಟರು, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಸಭಾ ನಿರ್ವಹಣೆ ಮಾಡಿದರು. ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಧನ್ಯವಾದವಿತ್ತರು.ಪಿ.ಎ. ಪೂಜಾರಿ, ಭಾಸ್ಕರ ಕುಲಾಲ್ ಬರ್ಕೆ ಸಹಕಾರವಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!